ಹೈದರಾಬಾದ್: ತಿರುಪತಿ ದೇವಸ್ಥಾನದ ಪ್ರಸಾದ ‘ಲಡ್ಡು’ ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಮಾಜಿ ಸಿಎಂ, ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮ 100 ದಿನಗಳ ಆಡಳಿತ ಕುರಿತು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ನಾಯ್ಡು ಅವರು ಘೋಷಿಸಿದ್ದ ‘ಸೂಪರ್ ಸಿಕ್ಸ್’ ಭರವಸೆಗಳು ಏನಾಯಿತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಅವರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ತಿರುಪತಿಯ ‘ಲಡ್ಡು’ ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ಜಗನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಪ್ಪ ಕಲಬೆರಕೆ ಆರೋಪಗಳು ಅತ್ಯಂತ ಕಳವಳಕಾರಿಯಾಗಿದ್ದು, ಜಗತ್ತಿನಾದ್ಯಂತ ಇರುವ ಕೋಟ್ಯಂತರ ಭಕ್ತರ ಭಾವನೆಗಳೊಂದಿಗೆ ಆಟವಾಡುವುದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರತಿ ಆರು ತಿಂಗಳಿಗೊಮ್ಮೆ ಟಿಟಿಡಿಯಿಂದ ತುಪ್ಪ ಪೂರೈಕೆದಾರರನ್ನು ಆಯ್ಕೆ ಮಾಡುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ದಶಕಗಳಿಂದ ನಡೆದುಕೊಂಡು ಬರುತ್ತಿದ್ದು, ಹೊಸದೇನೂ ಇಲ್ಲ ಅವರು ಹೇಳಿದ್ದಾರೆ.
ಎನ್‌ಡಿಎ ಸರ್ಕಾರದ ಅಡಿಯಲ್ಲಿ ಪ್ರಯೋಗಾಲಯ ವರದಿಗಳು, ಪರೀಕ್ಷೆಗಳು ಮತ್ತು ಸಂದರ್ಭಕ್ಕೆ ತಕ್ಕಂತೆ ಫಲಿತಾಂಶಗಳು ಕೂಡ ತಯಾರಾಗುತ್ತಿರುವುದು ವಿಪರ್ಯಾಸ ಎಂದು ಜಗನ್ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.