ADVERTISEMENT

ತಿರುಪತಿ ಲಡ್ಡು ವಿವಾದ | ತುಪ್ಪ ಪೂರೈಕೆದಾರರು ಪರಿಸ್ಥಿತಿ ಲಾಭ ಪಡೆದಿದ್ದಾರೆ: TTD

ಪಿಟಿಐ
Published 20 ಸೆಪ್ಟೆಂಬರ್ 2024, 11:23 IST
Last Updated 20 ಸೆಪ್ಟೆಂಬರ್ 2024, 11:23 IST
<div class="paragraphs"><p>ತಿರುಮಲ ತಿರುಪತಿ ದೇವಸ್ಥಾನ ಮತ್ತು&nbsp;ತಿರುಪತಿ ಲಡ್ಡು</p></div>

ತಿರುಮಲ ತಿರುಪತಿ ದೇವಸ್ಥಾನ ಮತ್ತು ತಿರುಪತಿ ಲಡ್ಡು

   

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಿರುಪತಿಯಲ್ಲಿ ‘ಲಡ್ಡು’ ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದರು ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮಲ್ಲಿ ಕಲಬೆರಕೆ ಪರೀಕ್ಷಾ ಸೌಲಭ್ಯಗಳ ಕೊರತೆಯಿಂದಾಗಿ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡುತ್ತಿದ್ದವರು ಪರಿಸ್ಥಿತಿ ಲಾಭ ಪಡೆದಿದ್ದಾರೆ. ಆಯ್ದ ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಬಹಿರಂಗಗೊಂಡಿದೆ’ ಎಂದು ಹೇಳಿದ್ದಾರೆ.

ADVERTISEMENT

‘ನಮ್ಮಲ್ಲಿ ಲ್ಯಾಬ್ ಇಲ್ಲದಿರುವುದರಿಂದ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಸಾಧ್ಯವಾಗಿಲ್ಲ. ಹೊರಗಿನ ಲ್ಯಾಬ್‌ಗಳಿಗೆ ಕಳುಹಿಸುವುದರಿಂದ ಹೆಚ್ಚು ವೆಚ್ಚವಾಗುತ್ತಿತ್ತು. ಹಾಗಾಗಿ ತುಪ್ಪ ಪೂರೈಕೆದಾರರು ಪರಿಸ್ಥಿತಿಯ ಲಾಭ ಪಡೆದಿದ್ದಾರೆ ಎಂಬುದು ಸ್ಪಷ್ಟ’ ಎಂದು ಶ್ಯಾಮಲಾ ರಾವ್ ತಿಳಿಸಿದ್ದಾರೆ.

ಸಿಎಂ ನಾಯ್ಡು ಅವರು ಈ ಹಿಂದೆಯೂ ತುಪ್ಪ ಹಾಗೂ ಲಡ್ಡುವಿನ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸುತ್ತಿರುವ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದರು ಎಂದು ರಾವ್ ಉಲ್ಲೇಖಿಸಿದ್ದಾರೆ.

ನಾಲ್ಕು ಟ್ರಕ್ ಲೋಡ್ ತುಪ್ಪವು ಉತ್ತಮ ಗುಣಮಟ್ಟದ್ದಾಗಿಲ್ಲ ಎಂದು ಕಂಡುಬಂದ ನಂತರ ತುಪ್ಪದ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ತುಪ್ಪದ ಮಾದರಿಯಲ್ಲಿ ‘ಹಂದಿಯ ಕೊಬ್ಬಿನ ಅಂಶ’ ಇರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ತುಪ್ಪ ಪೂರೈಕೆದಾರರು ಕಳಪೆ ಗುಣಮಟ್ಟದ ತುಪ್ಪವನ್ನು ನೀಡಿದರೆ ‘ಕಪ್ಪು ಪಟ್ಟಿಗೆ’ ಸೇರಿಸಲಾಗುವುದು ಎಂದು ಶ್ಯಾಮಲಾ ರಾವ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಮಾತನಾಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ವಿಶ್ವವಿಖ್ಯಾತ ತಿರುಪತಿ ‘ಲಡ್ಡು’ ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆರೋಪಿಸಿದ್ದರು.

‘ನಮ್ಮ ಸರ್ಕಾರ ಬಂದ ಮೇಲೆ ಶುದ್ಧ ತುಪ್ಪವನ್ನೇ ಬಳಸಲಾಗುತ್ತಿದೆ. ಪ್ರಸಾದದ ಗುಣಮಟ್ಟ ವೃದ್ಧಿಸಲು ತಯಾರಿಕೆಯ ಸ್ಥಳವನ್ನು ಶುದ್ದೀಕರಿಸಲಾಗಿದೆ’ ಎಂದೂ ಹೇಳಿದ್ದರು.

ತಿರುಪತಿ ‘ಲಡ್ಡು’ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆರೋಪವು, ಆಡಳಿತ ಪಕ್ಷವಾದ ಟಿಡಿಪಿ ಮತ್ತು ಪ್ರತಿಪಕ್ಷಗಳಾದ ವೈಎಸ್‌ಆರ್‌ಸಿಪಿ, ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.