ADVERTISEMENT

ತಿರುಪತಿ ಲಡ್ಡು ವಿವಾದ: ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿ.ಎಂ ರೆಡ್ಡಿ ಪತ್ರ

ತಿರುಪತಿ ಲಾಡು ವಿವಾದ:: ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ

ಪಿಟಿಐ
Published 22 ಸೆಪ್ಟೆಂಬರ್ 2024, 14:13 IST
Last Updated 22 ಸೆಪ್ಟೆಂಬರ್ 2024, 14:13 IST
<div class="paragraphs"><p>ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ</p></div>

ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ

   

ಅಮರಾವತಿ: ತಿರುಪತಿ ದೇವಸ್ಥಾನದ ಲಾಡು ವಿಚಾರದಲ್ಲಿ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿ ಕೂಡಲೇ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಛೀಮಾರಿ ಹಾಕುವಂತೆ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ಒತ್ತಾಯಿಸಿದ್ದಾರೆ.

ಈ ವಿಚಾರ ಕುರಿತು ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ನಾಯ್ಡು ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿರುವ ರೆಡ್ಡಿ, ‘ರಾಜಕೀಯ ಲಾಭಕ್ಕಾಗಿ ಕೋಟ್ಯಂತರ ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಿರುಪತಿ ದೇವಸ್ಥಾನದ ಲಾಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದು ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಗನ್‌ ಮೋಹನ್ ರೆಡ್ಡಿ, ಪ್ರಧಾನಿ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.

ಪ್ರಸಾದ ತಯಾರಿಸಲು ಬಳಸುವ ತುಪ್ಪವನ್ನು ಸ್ವೀಕರಿಸುವುದಕ್ಕೂ ಮುನ್ನ, ವೆಂಕಟೇಶ್ವರ ದೇವಸ್ಥಾನದ ಕಸ್ಟೋಡಿಯನ್‌ ಆದ ಟಿಟಿಡಿ ಅನುಸರಿಸುವ ವಿಧಾನಗಳನ್ನು ಅವರು ಪತ್ರದಲ್ಲಿ ವಿವರಿಸಿದ್ದು, ‘ನಾಯ್ಡು ಅವರ ಈ ನಡೆ ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಘನತೆ ಕುಂದುಂಟು ಮಾಡಿದೆ’ ಎಂದಿದ್ದಾರೆ.

‘ಈಗ ಉದ್ಭವಿಸಿರುವ ಸನ್ನಿವೇಶದಲ್ಲಿ, ಇಡೀ ರಾಷ್ಟ್ರವೇ ನಿಮ್ಮತ್ತ ಮುಖ ಮಾಡಿದೆ. ಸುಳ್ಳುಗಳನ್ನು ಹಬ್ಬಿಸುತ್ತಿರುವ ನಾಯ್ಡು ಅವರಿಗೆ ಕಠಿಣ ವಾಗ್ದಂಡನೆ ವಿಧಿಸಬೇಕು ಹಾಗೂ ಸತ್ಯವನ್ನು ಜನರಿಗೆ ತಿಳಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಎಸ್‌ಐಟಿ ತನಿಖೆ ಕೋರಿ ‘ಸುಪ್ರೀಂ’ಗೆ ಪಿಐಎಲ್‌

ನವದೆಹಲಿ: ತಿರುಪತಿ ದೇವಸ್ಥಾನದ ಪ್ರಸಾದ ಲಾಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವಿಚಾರ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆಗೆ ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ. ರೈತ ಹಾಗೂ ಹಿಂದೂ ಸೇನಾ ಸಂಘಟನೆ ಅಧ್ಯಕ್ಷರಾದ ಸುರ್ಜಿತ್‌ ಸಿಂಗ್‌ ಯಾದವ್ ಎಂಬುವವರು ಈ ಪಿಐಎಲ್‌ ಸಲ್ಲಿಸಿದ್ದಾರೆ. ‘ಕಲಬೆರಕೆ ಲಾಡು ವಿತರಿಸುವ ಮೂಲಕ ಟಿಟಿಡಿ ಹಿಂದೂ ಧರ್ಮದ ಅವಹೇಳನ ಮಾಡಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.