ಪ್ರಯಾಗ್‌ರಾಜ್: ‘ಭಕ್ತರು ಇನ್ನು ಮುಂದೆ ದೇವರಿಗೆ ಹೊರಗಿನಿಂದ ಖರೀದಿಸಿದ ಸಿಹಿತಿನಿಸುಗಳನ್ನು ಅರ್ಪಿಸಬಾರದು. ತೆಂಗಿನಕಾಯಿ, ಹಣ್ಣುಗಳು ಹಾಗೂ ಡ್ರೈಫ್ರುಟ್ಸ್‌ಗಳನ್ನು ಮಾತ್ರವೇ ದೇವರಿಗೆ ಅರ್ಪಿಸಬೇಕು’ ಎಂದು ಉತ್ತರ ಪ್ರದೇಶದ ಹಲವು ದೇವಸ್ಥಾನ ಆಡಳಿತ ಮಂಡಳಿಗಳು ಭಕ್ತರಿಗೆ ಸೂಚಿಸಿವೆ.
‘ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದಲ್ಲಿನ ಲಾಡು ಪ್ರಕರಣದಂತೆ, ನಮ್ಮಲ್ಲಿಯೂ ಆಗಬಾರದು ಎಂಬ ಕಾರಣಕ್ಕೆ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಹೇಳಿವೆ. ಕೆಲವು ಆಡಳಿತ ಮಂಡಳಿಗಳು, ‘ತಾವೇ ಸಿಹಿತಿನಿಸುಗಳನ್ನು ತಯಾರಿಸುತ್ತೇವೆ’ ಎಂದಿವೆ.
‘ತಿರುಪತಿ ದೇವಸ್ಥಾನದ ವಿವಾದ ನಂತರ, ಹೊರಗಡೆಯಿಂದ ಖರೀದಿಸಿ ತಂದ ಸಿಹಿತಿನಿಸುಗಳನ್ನು ದೇವರಿಗೆ ಅರ್ಪಿಸುವುದನ್ನು ನಾವು ನಿಷೇಧಿಸಿದ್ದೇವೆ. ನಮ್ಮ ದೇವಾಲಯದ ಆವರಣದ ಅಂಗಡಿಗಳಲ್ಲಿ ದೊರೆಯುವ ಲಾಡು–ಪೇಡಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಬೇಕು ಎಂದು ನಾವು ಜಿಲ್ಲಾಧಿಕಾರಿಯನ್ನು ಕೋರಿದ್ದೇವೆ’ ಎಂದು ಮನಕಾಮೇಶ್ವರ ದೇವಾಲಯದ ಮಹಂತ ಶ್ರೀಧರಾನಂದ ಬ್ರಹ್ಮಚರ್ಯ ಮಹಾರಾಜ್ ಹೇಳಿದರು.
‘ಸಿಹಿತಿನಿಸುಗಳ ಪರಿಶುದ್ಧತೆಯ ಪ್ರಮಾಣ ದೊರೆಯುವವರೆಗೂ ದೇವರಿಗೆ ಸಿಹಿತಿನಿಸುಗಳನ್ನು ಅರ್ಪಿಸುವುದಕ್ಕೆ ಅವಕಾಶವಿಲ್ಲ. ಮನೆಯಿಂದ ತಯಾರಿಸಿ ತಂದ ಸಿಹಿತಿನಿಸುಗಳನ್ನು ಅರ್ಪಿಸಬಹುದು’ ಎಂದೂ ಹೇಳಿದರು.
‘ದೇವಸ್ಥಾನದ ಆವರಣದಲ್ಲಿಯೇ ಸಿಹಿತಿನಿಸುಗಳ ಅಂಗಡಿಗಳನ್ನು ತೆರೆಯುವ ಯೋಚನೆ ಇದೆ’ ಎಂದು ಪ್ರಯಾಗ್‌ರಾಜ್‌ನ ಪ್ರಸಿದ್ಧ ಲಲಿತಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.