ತಿರುಪತಿ/ಹೈದರಾಬಾದ್: ತಿರುಪತಿಯ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಆಗಿರುವ ಪ್ರಕರಣದ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರು ವುದರಿಂದಾಗಿ ಅಕ್ಟೋಬರ್ 3 ರವರೆಗೆ ತನಿಖೆಯನ್ನು ಸ್ಥಗಿತಗೊಳಿಸಿರುವುದಾಗಿ ಡಿಜಿಪಿ ಸಿ.ದ್ವಾರಕಾ ತಿರುಮಲ ರಾವ್ ಮಂಗಳವಾರ ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ತನಿಖೆ ಆರಂಭಿಸಲಾಗುವುದು ಎಂದ ಅವರು, ಕೋರ್ಟ್ ಮುಂದಿನ ವಿಚಾರಣೆಯನ್ನು ಅ.3ಕ್ಕೆ ನಿಗದಿಪಡಿಸಿದೆ ಎಂದು ತಿಳಿಸಿದರು.
‘ನ್ಯಾಯಾಲಯವು ತನಿಖೆ ಸ್ಥಗಿತಕ್ಕೆ ಆದೇಶಿಸಲಿಲ್ಲ. ಆದರೆ, ವಕೀಲರ ಸಲಹೆಯ ಮೇರೆಗೆ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ. ಅ.3 ರಂದು ವಿಚಾರಣೆಯ ನಂತರ ನಾವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮುಂದುವರಿಯುತ್ತೇವೆ. ಈ ಪ್ರಕರಣವು ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲಿರುವುದ ರಿಂದ ಸದ್ಯಕ್ಕೆ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಡಿಜಿಪಿ ಯವರು, ತಿರುಪತಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ದಸರಾ ನವರಾತ್ರಿ ಹಬ್ಬದ ಹಿನ್ನೆಲೆ ಯಲ್ಲಿ ಅ.4 ರಂದು ಆರಂಭವಾಗಲಿರುವ ತಿರುಮಲ ದೇಗುಲದ ಬ್ರಹ್ಮೋತ್ಸವಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಅವರು ತಿರುಪತಿಗೆ ಭೇಟಿ ನೀಡಿದ್ದರು.
ಸೋಮವಾರ ಒಂದು ಗುಂಪಿನ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪ ಬಳಸಲಾಗಿದೆ ಎಂದು ಆಂಧ್ರ ಸರ್ಕಾರ ಆತುರದ ಹೇಳಿಕೆ ನೀಡಿದಕ್ಕೆ ತರಾಟೆ ತೆಗೆದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.