ADVERTISEMENT

ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ತಿರುಪತಿ ಲಾಡು ವಿತರಿಸಲಾಗಿದೆ: ಮುಖ್ಯ ಅರ್ಚಕ

ಸಂಜಯ್ ಪಾಂಡೆ, ಲಖನೌ
Published 21 ಸೆಪ್ಟೆಂಬರ್ 2024, 12:58 IST
Last Updated 21 ಸೆಪ್ಟೆಂಬರ್ 2024, 12:58 IST
<div class="paragraphs"><p>ರಾಮ ಮಂದಿರ</p></div>

ರಾಮ ಮಂದಿರ

   

ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ‘ಬಾಲ ರಾಮ’ನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಸಾದವಾಗಿ ತಿರುಪತಿಯ ಲಾಡುಗಳನ್ನು ಸಹ ವಿತರಿಸಲಾಗಿದೆ ಎಂದು ರಾಮ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಅತ್ಯಂತ ದುರದೃಷ್ಟಕರ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಇದರಿಂದಾಗಿ ತಿರುಪತಿ ದೇವಸ್ಥಾನದ ಪ್ರತಿಷ್ಠೆಯ ಮೇಲೂ ಪರಿಣಾಮ ಬೀರಿದೆ’ ಎಂದು ಹೇಳಿದ್ದಾರೆ.

ADVERTISEMENT

‘ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಕ್ತರಿಗೆ ವಿತರಿಸಲಾದ ಲಾಡುಗಳ ಪ್ರಮಾಣದ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಸುಮಾರು ಮೂರು ಟನ್ ತೂಕದ ಲಾಡುಗಳನ್ನು ಅಯೋಧ್ಯೆಗೆ ಕಳುಹಿಸಿತ್ತು ಎಂದು ಮೂಲಗಳು ತಿಳಿಸಿವೆ.

ಸತ್ಯೇಂದ್ರ ದಾಸ್ ಹೇಳಿಕೆ ಸಂಬಂಧ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಕ್ತರಿಗೆ ಏಲಕ್ಕಿ ಬೀಜಗಳನ್ನು ಪ್ರಸಾದವಾಗಿ ವಿತರಿಸಲಾಗಿದೆ ಎಂದಷ್ಟೇ ಹೇಳಿದೆ.

ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಕ್ತರಿಗೆ ತಿರುಪತಿ ಲಾಡುಗಳನ್ನು ವಿತರಿಸಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಸ್ಟ್‌ನ ಅಧಿಕಾರಿಯೊಬ್ಬರು, ‘ಈ ಸೂಕ್ಷ್ಮ ವಿಷಯದ ಬಗ್ಗೆ ನಾವು ಪ್ರತಿಕ್ರಿಯಿಸುವುದು ಸರಿಯಲ್ಲ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಚಿತ್ರರಂಗದ ಗಣ್ಯರು, ಉದ್ಯಮಿಗಳು ಸೇರಿದಂತೆ ಸುಮಾರು ಎಂಟು ಸಾವಿರ ಜನರು ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದವು ಆಂಧ್ರ ಪ್ರದೇಶವಷ್ಟೇ ಅಲ್ಲದೇ ದೇಶದಾದ್ಯಂತ ಸದ್ದುಮಾಡಿದೆ.

ದೇವಸ್ಥಾನದ ಪಾವಿತ್ರ್ಯ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ವಿವಿಧೆಡೆ ಕೇಳಿಬಂದಿದೆ. ಆಂಧ್ರ ಮತ್ತು ದೇಶದ ವಿವಿಧೆಡೆ ರಾಜಕೀಯ ನಾಯಕರ ವಾಗ್ವಾದವೂ ಜೋರಾಗಿದೆ.

ನಾಯ್ಡು ಆರೋಪವೇನು?

ರಾಜ್ಯದಲ್ಲಿ ಹಿಂದಿದ್ದ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪವನ್ನು ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಆರೋಪಿಸಿದ್ದರು.

ಜಗನ್‌ ತಿರುಗೇಟು

‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ದೇವರನ್ನೂ ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಆ ಮೂಲಕ ಅವರು ಕೋಟ್ಯಂತರ ಭಕ್ತರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ತಿರುಗೇಟು ನೀಡಿದ್ದರು.

‘ನಾಯ್ಡು ಅವರ 100 ದಿನಗಳ ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಜನರ ದಿಕ್ಕು ತಪ್ಪಿಸಲು ಕಲಬೆರಕೆ ವಿವಾದವನ್ನು ಸೃಷ್ಟಿಸಿದ್ದಾರೆ’ ಎಂದು ಅವರು ಆರೋಪಿಸಿದ್ದರು.

‘ಕೋಟ್ಯಂತರ ಭಕ್ತರ ಭಾವನೆಗಳ ಜತೆ ಆಟವಾಡುವುದು ಸರಿಯಾ’ ಎಂದು ಪ್ರಶ್ನಿಸಿದ ಅವರು, ‘ಎಲ್ಲ ಮಾದರಿಗಳ ಪರೀಕ್ಷೆ ಮತ್ತು ಫಲಿತಾಂಶಗಳು ಎನ್‌ಡಿಎ ಸರ್ಕಾರದ ಅಡಿಯಲ್ಲಿರುವ ಪ್ರಯೋಗಾಲಯಗಳಿಂದಲೇ ಬಂದಿವೆ’ ಎಂದು ಲೇವಡಿ ಮಾಡಿದ್ದರು.

‘ತಿರುಪತಿ ಲಾಡುವಿನ ಶುದ್ಧತೆ ಯಥಾಸ್ಥಿತಿಗೆ’

ತಿರುಪತಿಯ ಲಾಡು ಪ್ರಸಾದದ ಪರಿಶುದ್ಧತೆಯನ್ನು ಯಥಾಸ್ಥಿತಿಗೆ ತರಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಿಳಿಸಿದೆ.

ಪ್ರಸಾದದ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಲಾಡುವಿನ ‘ದೈವತ್ವ ಮತ್ತು ಪರಿಶುದ್ಧತೆ ಈಗ ಕಳಂಕರಹಿತವಾಗಿದೆ’ ಎಂದು ಅದು ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಭಕ್ತರಿಗೆ ತೃಪ್ತಿಯಾಗುವಂತೆ ಲಾಡು ಪ್ರಸಾದದ ಪಾವಿತ್ರ್ಯ ರಕ್ಷಿಸಲು ಟಿಟಿಡಿ ಬದ್ಧವಾಗಿದೆ ಎಂದು ಪೋಸ್ಟ್‌ನಲ್ಲಿ ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.