ಹೈದರಾಬಾದ್: ತಿರುಪತಿ ದೇವಸ್ಥಾನದ ಲಾಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾದ ಹಿನ್ನೆಲೆಯಲ್ಲಿ, ದೇವಸ್ಥಾನದ ಶುದ್ಧೀಕರಣದ ಬಗ್ಗೆ ಚಿಂತನೆ ನಡೆಸಲಾಗಿದೆ. ಸಂಪ್ರೋಕ್ಷಣ ಕಾರ್ಯದ ಭಾಗವಾಗಿ ಶಾಂತಿ ಹೋಮವನ್ನು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಕೈಗೊಂಡಿದೆ.
ಇಂದು ತಿರುಪತಿಯಲ್ಲಿ ಶಾಂತಿ ಹೋಮವನ್ನು ಕೈಗೊಂಡಿದ್ದು, ಈ ಹೋಮದಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಶಾಮಲಾರಾವ್ ಮತ್ತು ಮಂಡಳಿಯ ಇತರೆ ಅಧಿಕಾರಿಗಳು ಸೇರಿದಂತೆ ಅನೇಕ ಅರ್ಚಕರು ಪಾಲ್ಗೊಂಡಿದ್ದರು ಎಂದು ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
‘ಟಿಟಿಡಿ ವಿಚಾರವಾಗಿ ಏನು ಮಾಡಬೇಕು ಹಾಗೂ ಅದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಸಂಪ್ರೋಕ್ಷಣ (ವಿಧಿಬದ್ಧವಾದ ಶುದ್ಧೀಕರಣ ಕಾರ್ಯ) ಹೇಗೆ ನಡೆಯಬೇಕು ಎಂಬುದನ್ನು ಕಂಚಿ ಪೀಠಾಧಿಪತಿಗಳು, ಸನಾತದ ಧರ್ಮದ ವಿದ್ವಾಂಸರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ. ನಾವು ಈ ನಿಟ್ಟಿನಲ್ಲಿ ಈಗಾಗಲೇ ಆಲೋಚನೆ ನಡೆಸಿದ್ದೇವೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸುದ್ದಿಗಾರರಿಗೆ ತಿಳಿಸಿದ್ದರು.
ಸಂಪ್ರೋಕ್ಷಣ ಕಾರ್ಯ ನಡೆಸುವುದರಿಂದ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ, ಸಮೃದ್ಧಿ ನೆಲಸುತ್ತದೆ ಮತ್ತು ಆಧ್ಯಾತ್ಮಿಕ ಶಾಂತಿ ಸಿಗುತ್ತಿದೆ ಎಂಬ ನಂಬಿಕೆ ಇದೆ ಎಂದು ನಾಯ್ಡು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.