ADVERTISEMENT

ತಿರುಪತಿ: ಅಂತರ ಕಾಯ್ದುಕೊಂಡು ದರ್ಶನ ನೀಡಲು ನಡೆದಿದೆ ತಾಲೀಮು

ಮೇ 31ರ ಬಳಿಕ ದರ್ಶನಕ್ಕೆ ಮುಕ್ತಗೊಳಿಸುವ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2020, 17:00 IST
Last Updated 20 ಮೇ 2020, 17:00 IST
ತಿರುಮಲ ದೇವಸ್ಥಾನ
ತಿರುಮಲ ದೇವಸ್ಥಾನ   

ಹೈದರಾಬಾದ್: ನಾಲ್ಕನೇ ಹಂತದ ಲಾಕ್‌ಡೌನ್‌ ಮುಗಿದ ಬಳಿಕ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಭಕ್ತರ ದರ್ಶನಕ್ಕೆ ತೆರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಲಾಕ್‌ಡೌನ್ 4.0 ಜಾರಿಯಲ್ಲಿರುವುದರಿಂದ ಮೇ 31ರ ವರೆಗೆ ದೇಗುಲವನ್ನು ಭಕ್ತರ ದರ್ಶನಕ್ಕೆ ಬಂದ್ ಮಾಡಲಾಗಿದೆ.

ಈ ಮಧ್ಯೆ, ಮುಂದಿನ ದಿನಗಳಲ್ಲಿ ಅಂತರ ಕಾಯ್ದುಕೊಂಡು ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲು ತಯಾರಿ ನಡೆದಿದೆ. ಇದಕ್ಕಾಗಿ ಮಂಗಳವಾರ ತಿರುಮಲ ತಿರುಪತಿ ದೇವಸ್ಥಾನಮಂಡಳಿಯು (ಟಿಟಿಡಿ) ರಿಹರ್ಸಲ್ ಕೂಡ ನಡೆಸಿದೆ. ಆಯ್ದ ಭಕ್ತರನ್ನು ತಾಲೀಮಿಗೆ ಬಳಸಿಕೊಳ್ಳಲಾಗಿದೆ ಎಂದು ಔಟ್‌ಲುಕ್ ಇಂಡಿಯಾ ಜಾಲತಾಣ ವರದಿ ಮಾಡಿದೆ.

ಟಿಟಿಡಿ ಸಿಬ್ಬಂದಿಯ ಕುಟುಂಬದವರು ಹಾಗೂ ಕೆಲವು ಮಂದಿ ಸ್ಥಳಿಯರನ್ನು ತಾಲೀಮಿಗೆ ಬಳಸಿಕೊಳ್ಳಲಾಗಿದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ADVERTISEMENT

ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರತಿ ಸಾಲಿನಲ್ಲಿ ನಿಲ್ಲುವ ಸ್ಥಳಗಳಲ್ಲಿ ಗುರುತು ಮಾಡಲಾಗಿದೆ. ದೇಗುಲದ ಆವರಣವನ್ನು ಶುಚಿಗೊಳಿಸಲಾಗಿದೆ ಎಂದೂ ಹೇಳಲಾಗಿದೆ.

ಮೇ–ಜುಲೈ ಅವಧಿಯಲ್ಲಿ ಸ್ಥಳೀಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅಂದರೆ, ತಿರುಪತಿ ಪುರಸಭೆ ಮತ್ತು ತಿರುಮಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ದರ್ಶನಕ್ಕೆ ಟೋಕನ್ ಪಡೆದುಕೊಳ್ಳುವುದ ಹೇಗೆ ಎಂಬ ಕುರಿತು ಟಿಟಿಡಿ ಶೀಘ್ರದಲ್ಲೇ ವಿಸ್ತೃತ ಮಾಹಿತಿ ನೀಡಲಿದೆ ಎನ್ನಲಾಗಿದೆ.

ದರ್ಶನಕ್ಕೆ ಅವಕಾಶ ನೀಡಲು ಅನುಮತಿ ಕೋರಿ ಟಿಟಿಡಿಯು ಆಂಧ್ರ ಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್ ಜಾಲತಾಣ ಸಹ ವರದಿ ಮಾಡಿದೆ. ದೇಗುಲವನ್ನು ದರ್ಶನಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದೂ ವರದಿ ಉಲ್ಲೇಖಿಸಿದೆ.

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದರಿಂದ ದೇವಾಲಯವನ್ನು ಮಾರ್ಚ್‌ನಲ್ಲಿ ಮುಚ್ಚಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.