ADVERTISEMENT

TISS: 100ಕ್ಕೂ ಹೆಚ್ಚು ಸಿಬ್ಬಂದಿ ವಜಾ

ಸಂಸ್ಥೆಯ ಕ್ರಮಕ್ಕೆ ಬೋಧಕ, ವಿದ್ಯಾರ್ಥಿ ಸಂಘಟನೆಗಳ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:10 IST
Last Updated 30 ಜೂನ್ 2024, 15:10 IST
.
.   

ಮುಂಬೈ: ಹಣಕಾಸಿನ ಕೊರತೆಯಿಂದಾಗಿ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಸೋಷಿಯಲ್‌ ಸೈನ್ಸಸ್‌ (ಟಿಐಎಸ್‌ಎಸ್‌) 100ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯ ಗುತ್ತಿಗೆಯ ಒಪ್ಪಂದ ನವೀಕರಿಸಿಲ್ಲ. ಟಿಐಎಸ್‌ಎಸ್‌ನ ಈ ಕ್ರಮವನ್ನು ಬೋಧಕ ಮತ್ತು ವಿದ್ಯಾರ್ಥಿ ಸಂಘಟನೆಗಳು ತೀವ್ರವಾಗಿ ಟೀಕಿಸಿವೆ. ಇದು ರಾಜಕೀಯ ವಿವಾದವಾಗಿಯೂ ಮಾರ್ಪಟ್ಟಿದೆ.

ವರದಿಯ ಪ್ರಕಾರ, ಸಂಸ್ಥೆಯ ಮುಂಬೈ, ತುಳಜಾಪುರ, ಗುವಾಹಟಿ ಮತ್ತು ಹೈದರಾಬಾದ್‌ ಕ್ಯಾಂಪಸ್‌ಗಳಲ್ಲಿನ 55 ಅಧ್ಯಾಪಕರು ಮತ್ತು 60 ಬೋಧಕೇತರ ಸಿಬ್ಬಂದಿ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಮಾಹಿತಿಯನ್ನು ಟಿಐಎಸ್‌ಎಸ್‌ ದೃಢೀಕರಿಸಿಲ್ಲ. ಆದರೆ ಟಿಐಎಸ್‌ಎಸ್‌ನ ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ (ಪಿಎಸ್‌ಎಫ್‌) ‘ಎಕ್ಸ್‌’ ಮತ್ತು ಇನ್‌ಸ್ಟಾಗ್ರಾಮನಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದು, ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದೆ. 

ADVERTISEMENT

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ಟಿಐಎಸ್‌ಎಸ್‌ನ ನೂರಾರು ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಸಾಮೂಹಿಕವಾಗಿ ವಜಾಗೊಳಿಸಿರುವುದನ್ನು ಖಂಡಿಸುತ್ತೇವೆ’ ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ. ಅಲ್ಲದೆ ಶಿಕ್ಷಕರು ಮತ್ತು ಸಿಬ್ಬಂದಿ ಜತೆಗೆ ಸಂಘಟನೆ ನಿಲ್ಲುತ್ತದೆ ಎಂದು ಅದು ಪೋಸ್ಟ್‌ನಲ್ಲಿ ತಿಳಿಸಿದೆ.

ಟಿಐಎಸ್‌ಎಸ್‌ ಆಡಳಿತವು 2024ರ ಜೂನ್‌ 28ರಂದು ಸಂಸ್ಥೆಯ ಸುಮಾರು 100 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ, ವಜಾಗೊಳಿಸಿದ ಪತ್ರವನ್ನು ಕಳುಹಿಸಿದೆ ಎಂದು ಗೊತ್ತಾಗಿದೆ. ಅವರ ನೇಮಕಾತಿ ಒಪ್ಪಂದಗಳನ್ನು ನವೀಕರಿಸಲಾಗುವುದಿಲ್ಲ ಮತ್ತು ಅವರ ಸೇವೆಯು 2024ರ ಜೂನ್‌ 30ಕ್ಕೆ ಕೊನೆಗೊಳ್ಳುತ್ತದೆ ಎಂದು ಆಡಳಿತವು ತಿಳಿಸಿದೆ ಎಂದು ಪಿಎಸ್‌ಎಫ್‌ ಹೇಳಿದೆ.

ಅದಾಗ್ಯೂ ಒಪ್ಪಂದ ನವೀಕರಿಸದ ಸಿಬ್ಬಂದಿ ಸಂಖ್ಯೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಟಾಟಾ ಎಜುಕೇಷನ್‌ ಟ್ರಸ್ಟ್‌ನಿಂದ ಧನಸಹಾಯ ಪಡೆದ ಸುಮಾರು ನೂರಾರು ಸಿಬ್ಬಂದಿ ಟಿಐಎಸ್‌ಎಸ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಅವರಿಗೆ ಕೇವಲ 48 ಗಂಟೆಗೂ ಮುನ್ನ ಈ ಆಘಾತಕಾರಿ ಸುದ್ದಿ ಬಂದಿದ್ದು, ಇದೀಗ ನಿರುದ್ಯೋಗಿಗಳನ್ನಾಗಿಸಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮತ್ತು ಟಿಐಎಸ್‌ಎಸ್‌ ಆಡಳಿತದ ನಾಯಕತ್ವದ ವೈಫಲ್ಯವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ದೂರಿದೆ. 

ಟಿಐಎಸ್‌ಎಸ್‌ 90 ವರ್ಷಗಳಿಂದ ಅಸ್ತಿತ್ವದಲ್ಲಿರುವ ಪ್ರಮುಖ ಸಂಸ್ಥೆ. ಇದು ಸಾಮಾಜಿಕ ವಿಜ್ಞಾನ ಸಂಸ್ಥೆಯಾಗಿ ವಿಶಿಷ್ಟ ಸ್ಥಾನ ಗಳಿಸಿದೆ. ಇದನ್ನು ಅಲ್ಲಿನ ಅಧ್ಯಾಪಕರು ಮತ್ತು ಸಿಬ್ಬಂದಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಕಳೆದ ವರ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕರ ಟಿಐಎಸ್‌ಎಸ್‌ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಪೂರ್ಣ ಪ್ರಮಾಣದ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನಾಗಿ ರೂಪಿಸುವುದಾಗಿ ತಿಳಿಸಿತ್ತು ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ. 

ಸಿಬ್ಬಂದಿಯನ್ನು ವಜಾಗೊಳಿಸುವ ಕ್ರಮವನ್ನು ಸಿಪಿಐ, ಆರ್‌ಜೆಡಿ ಪಕ್ಷಗಳು ಖಂಡಿಸಿವೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಿತ್ತುಹಾಕುವ ‘ಅಮೃತ ಕಾಲ’ ಇದಾಗಿದೆ ಎಂದು ಸಿಪಿಐ ಖಂಡಿಸಿದ್ದರೆ, ‘ಇದರಿಂದ ಆಘತವಾಗಿದೆ ಆದರೆ ಆಶ್ಚರ್ಯವಾಗಿಲ್ಲ’ ಎಂದು ಆರ್‌ಜೆಡಿ ಪ್ರತಿಕ್ರಿಯಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.