ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ತೃಣಮೂಲ ಕಾಂಗ್ರೆಸ್(ಟಿಎಂಸಿ) ಉಳಿಸಿಕೊಂಡಿದೆ. ಒಂದು ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ವಶಪಡಿಸಿಕೊಂಡಿದೆ.
ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಭಾರಿ ಸದ್ದು ಮಾಡಿದ್ದು, ಉಪಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿಗೆ ಹಿನ್ನಡೆ ಆಗುವ ಸಾಧ್ಯತೆಯಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇಂದಿನ ಫಲಿತಾಂಶ ಎಲ್ಲಾ ಸಮೀಕ್ಷೆಗಳನ್ನು ಬುಡಮೇಲು ಮಾಡಿದೆ.
ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳು ಟಿಎಂಸಿ ಭದ್ರಕೋಟೆಯಾದ ದಕ್ಷಿಣ ಬಂಗಾಳದಲ್ಲಿದೆ. ಆದರೆ ಮದರಿಹತ್ ಕ್ಷೇತ್ರವು ಉತ್ತರ ಬಂಗಾಳದಲ್ಲಿದ್ದು, 2021ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಇದೀಗ ಆ ಕ್ಷೇತ್ರವೂ ಟಿಎಂಸಿಯ ತೆಕ್ಕೆಗೆ ಬಂದಿದೆ.
ವೈದ್ಯರ ಪ್ರತಿಭಟನೆಯ ಲಾಭ ಪಡೆಯಲು ಹವಣಿಸಿದ್ದ ಸಿಪಿಐ(ಎಂ) ನೇತೃತ್ವದ ಎಡರಂಗದ ಲೆಕ್ಕಚಾರವೂ ಚುನಾವಣೆಯಲ್ಲಿ ಉಲ್ಟಾ ಹೊಡೆದಿದೆ. ಸಿತೈ, ತಲ್ದಂಗ್ರಾ, ಮೇದಿನಿಪುರ ಮತ್ತು ಮದರಿಹತ್‌ನಲ್ಲಿ ಠೇವಣಿ ಕಳೆದುಕೊಂಡಿದೆ.
ಇದೇ ಮೊದಲ ಬಾರಿಗೆ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಅದೃಷ್ಟ ಪರೀಕ್ಷೆಗಿಳಿದಿದ್ದ ಕಾಂಗ್ರೆಸ್ ಕೂಡ ಹೀನಾಯ ಸೋಲು ಕಂಡಿದೆ.
ನೈಹತಿ, ಹರೋವಾ, ಮೇದಿನಿಪುರ, ತಲ್ದಂಗ್ರಾ, ಸಿತೈ (ಎಸ್‌ಸಿ ಮೀಸಲು), ಮತ್ತು ಮದರಿಹತ್ (ಎಸ್‌ಟಿ ಮೀಸಲು) ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.