ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಶಾಸಕ ತಪನ್ ಚಟರ್ಜಿ ಅವರು ವಿಧಾನಸಭೆಯ ಆವರಣದಲ್ಲಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬುಧವಾರ ಆರೋಪಿಸಿದ್ದಾರೆ.
ವಿಧಾನಸಭೆಯ ಆವರಣದಲ್ಲಿ ನನಗೆ ಭದ್ರತೆ ಭೀತಿ ಇದೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಟಿಎಂಸಿಯ ಚಟರ್ಜಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಭಾಧ್ಯಕ್ಷ ಬಿಮನ್ ಬಂದೋಪಾಧ್ಯಾಯ ಅವರಿಗೆ ಪತ್ರ ಬರೆದಿದ್ದಾರೆ.
ಘಟನೆ ಸಂಬಂಧ ತನಿಖೆ ನಡೆಸುವುದಾಗಿ ಸ್ಪೀಕರ್ ಬಿಮನ್ ಬಂದೋಪಾಧ್ಯಾಯ ತಿಳಿಸಿದ್ದಾರೆ.
'ಇಂದು ಅಪರಾಹ್ನ 12.20ರ ಸುಮಾರಿಗೆ ಶಾಸಕ ತಪನ್ ಚಟರ್ಜಿ ಅವರು ನನ್ನ ಕಡೆ ಧಾವಿಸಿ ದೈಹಿಕವಾಗಿ ಹಲ್ಲೆ ನಡೆಸಲು ಯತ್ನಿಸಿದ್ದರು. ಇತರೆ ಶಾಸಕರು ಹಾಗೂ ಮಾಧ್ಯಮಗಳ ಎದುರು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ವಿಧಾನಸಭೆಯ ಆವರಣದಲ್ಲಿ ನನಗೆ ಭದ್ರತೆ ಭೀತಿ ಕಾಡುತ್ತಿದೆ' ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
'ಇದು ಎರಡನೇ ಸಲ ಆಡಳಿತ ಪಕ್ಷದ ಸದಸ್ಯರು ಬೆದರಿಕೆ ಹಾಕಿದ್ದಾರೆ. ವಿಧಾನಸಭೆಯ ಆವರಣದಲ್ಲಿ ವೈಯಕ್ತಿಕ ಭದ್ರತೆ ಇಲ್ಲದಿರುವುದರಿಂದ ವಿರೋಧ ಪಕ್ಷದ ಶಾಸಕರು ಸುರಕ್ಷಿತರಲ್ಲ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.