ADVERTISEMENT

ವ್ಯಕ್ತಿ ಹತ್ಯೆ: ಬಿಎಸ್‌ಎಫ್‌, ಅಮಿತ್‌ ಶಾ ಜನರ ಕ್ಷಮೆ ಕೋರಬೇಕು  –ಅಭಿಷೇಕ್‌

ಪಿಟಿಐ
Published 12 ಫೆಬ್ರುವರಿ 2023, 3:07 IST
Last Updated 12 ಫೆಬ್ರುವರಿ 2023, 3:07 IST
ಟಿಎಂಸಿ
ಟಿಎಂಸಿ   

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ಸ್ಥಳೀಯ ವ್ಯಕ್ತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ಡಿಸೆಂಬರ್‌ ತಿಂಗಳಲ್ಲಿ ಕೂಚ್‌ ಬೆಹಾರ್‌ ಜಿಲ್ಲೆಯ ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್‌ ಯೋಧರೊಬ್ಬರು 24 ವರ್ಷದ ಪ್ರೇಮ್‌ ಕುಮಾರ್‌ ಬರ್ಮನ್‌ ಎಂಬ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಮೃತ ಯುವಕ ಜಾನುವಾರು ಕಳ್ಳ ಸಾಗಾಣಿಕೆದಾರ ಎಂದು ಬಿಎಸ್‌ಎಫ್‌ ಹೇಳಿತ್ತು.

ಆದರೆ, ಪ್ರೇಮ್‌ ಕುಮಾರ್‌ ವಲಸೆ ಕಾರ್ಮಿಕನಾಗಿದ್ದು ಮನೆಗೆ ವಾಪಸ್ಸು ಬರುವಾಗ ಹತ್ಯೆ ಮಾಡಲಾಗಿದೆ ಎಂದು ಮೃತ ಯುವಕನ ಕುಟುಂಬದವರು ಹೇಳಿದ್ದರು.

ADVERTISEMENT

ಬಿಎಸ್‌ಎಫ್‌ ಯೋಧರು ಪ್ರೇಮ್‌ ಕುಮಾರ್‌ನನ್ನು ಹತ್ಯೆ ಮಾಡಿದ್ದು ಯಾಕೆ? ಎಂದು ಅಭಿಷೇಕ್ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ. ನಾವು ನಿಮಗೆ 48 ಗಂಟೆಗಳ ಸಮಯ ಕೊಡುತ್ತೇವೆ, ಅಷ್ಟರೊಳಗೆ ಕೇಂದ್ರ ಸರ್ಕಾರ, ಬಿಎಸ್‌ಎಫ್‌ ಅಧಿಕಾರಿಗಳು ಹಾಗೂ ಗೃಹ ಸಚಿವ ಅಮಿತ್‌ ಶಾ ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಬೇಕು ಅಥವಾ ಈ ಭಾಗದ ಜನರ ಕ್ಷೇಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಪ್ರೇಮ್‌ ಕುಮಾರ್‌ ಜಾನುವಾರು ಕಳ್ಳಸಾಗಣೆದಾರನಾಗಿದ್ದರೂ, ಬಿಎಸ್ಎಫ್ ಯೋಧರು ಆತನನ್ನು ಯಾಕೆ ಬಂಧಿಸಲಿಲ್ಲ? ನೀವು ಆತನಿಂದ ಬಂದೂಕು ಅಥವಾ ಇತರೆ ಮಾರಾಕಾಸ್ತ್ರಗಳನ್ನು ಪಡೆದುಕೊಂಡಿರುವಿರಾ? ಆತನ ಮೇಲೆ ಗುಂಡು ಹಾರಿಸುವ ಅಗತ್ಯವೇನಿತ್ತು? ಎಂದಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಈ ಘಟನೆ ಬಗ್ಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಬಿಎಸ್ಎಫ್ ಅಧಿಕಾರಿಗಳನ್ನು ನ್ಯಾಯಾಲಯದ ಮುಂದೆ ತರುತ್ತೇವೆ ಎಂದು ಹೇಳಿದರು.

ಟಿಎಂಸಿ ನಾಯಕ ಭದ್ರತಾ ಪಡೆಗಳನ್ನು ಪ್ರಶ್ನೆ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.