ನವದೆಹಲಿ: ‘ಅಲ್ಪಸಂಖ್ಯಾತರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಬಹಿರಂಗಗೊಳಿಸಿದ ಸಾಕ್ಷ್ಯಚಿತ್ರ’ ಎಂದು ಬಿಬಿಸಿ ಸಾಕ್ಷ್ಯಚಿತ್ರ ಕುರಿತು ತಾವು ಮಾಡಿದ್ದ ಟ್ವೀಟ್ ಅನ್ನು ಟ್ವಿಟ್ಟರ್ ಅಳಿಸಿಹಾಕಿದೆ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಆರೋಪಿಸಿದ್ದಾರೆ.
‘ಭಾರತದ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಅದನ್ನು ಅಳಿಸಿ ಹಾಕಲಾಗಿದೆ’ ಎಂದು ತಾವು ಟ್ವೀಟ್ ಮಾಡಿದ್ದ ಮೈಕ್ರೊಬ್ಲಾಗಿಂಗ್ ಸೈಟ್ ಇ–ಮೇಲ್ ಮೂಲಕ ತಮಗೆ ತಿಳಿಸಿದೆ ಎಂದು ಒಬ್ರಿಯಾನ್ ತಿಳಿಸಿದ್ದಾರೆ. ಇದರ ಜತೆಗೆ ಅವರು ಟ್ವಿಟ್ಟರ್‌ನ ಇ–ಮೇಲ್ ಅನ್ನೂ ಟ್ವಿಟ್ಟರ್‌ನಲ್ಲಿಯೇ ಪೋಸ್ಟ್ ಮಾಡಿದ್ದಾರೆ.
‘ಸೆನ್ಸಾರ್‌ಶಿಪ್, ಟ್ಟಿಟ್ಟರ್ ಇಂಡಿಯಾವು ಬಿಬಿಸಿ ಸಾಕ್ಷ್ಯಚಿತ್ರ ಕುರಿತ ನನ್ನ ಟ್ವೀಟ್ ಅನ್ನು ಅಳಿಸಿದೆ. ಪ್ರಧಾನಿ ಮೋದಿ ಅವರು ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಾರೆ ಎನ್ನುವುದನ್ನು ಬಹಿರಂಗಗೊಳಿಸಿದ್ದ ಈ ಒಂದು ಗಂಟೆಯ ಅವಧಿಯ ಸಾಕ್ಷ್ಯಚಿತ್ರದ ಕುರಿತ ಟ್ವೀಟ್ ಅನ್ನು ಲಕ್ಷಾಂತರ ಜನರು ನೋಡಿದ್ದರು’ ಎಂದೂ ಅವರು ಹೇಳಿದ್ದಾರೆ.
‘ಟ್ವಿಟ್ಟರ್ ನೀಡಿರುವ ದುರ್ಬಲ ಕಾರಣವನ್ನು ನೋಡಿ. ಪ್ರತಿಪಕ್ಷಗಳು ತಮ್ಮ ಹೋರಾಟವನ್ನು ಮುಂದುವರಿಸುತ್ತವೆ’ ಎಂದೂ ಡೆರೆಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.