ADVERTISEMENT

ಪ್ಯಾಂಟ್ ಖರೀದಿಗೂ ಮೊಬೈಲ್ ಸಂಖ್ಯೆ; ಡೆಕಾಥ್ಲಾನ್ ವಿರುದ್ಧ ಸಂಸದೆ ಮಹುವಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 10:30 IST
Last Updated 28 ಏಪ್ರಿಲ್ 2022, 10:30 IST
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ   

ನವದೆಹಲಿ: ಷರಾಯಿ (ಪ್ಯಾಂಟ್‌) ಕೊಳ್ಳಲು ದುಡ್ಡು ಕೊಡುವ ಜೊತೆಗೆ ಮೊಬೈಲ್‌ ಸಂಖ್ಯೆ ಮತ್ತುಇ–ಮೇಲ್‌ ಐಡಿಯನ್ನೂ ಕೊಡಬೇಕು, ಇದು ಗೋಪ್ಯತೆ ಮತ್ತು ಗ್ರಾಹಕರ ಕಾನೂನುಗಳ ಉಲ್ಲಂಘನೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

ದೆಹಲಿ–ಎನ್‌ಸಿಆರ್‌ನ ಅನ್ಸಾಲ್‌ ಪ್ಲಾಜಾದಲ್ಲಿ ಕ್ರೀಡಾ ಪರಿಕರಗಳ ಮಾರಾಟ ಮಳಿಗೆ ಡೆಕಾಥ್ಲಾನ್‌ಗೆ ಭೇಟಿ ನೀಡಿದ್ದ ಮಹುವಾ ಮೊಯಿತ್ರಾ, ಅವರ ತಂದೆಗಾಗಿ ಒಂದು ಜೊತೆ ಷರಾಯಿ ಖರೀದಿಸಿದರು. ಆಯ್ಕೆ ಮಾಡಿದ ಉಡುಪಿಗೆ ಹಣ ನೀಡಿದರೂ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲಬೇಕಾಯಿತು. ಕಾರಣ, ಆ ಮಳಿಗೆಯ ಸಿಬ್ಬಂದಿ ಉಡುಪು ಖರೀದಿಸಲು ಹಣದ ಜೊತೆಗೆ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ಐಡಿ ಸಹ ಕೇಳಿದ್ದರು. ಅದಕ್ಕೆ ಒಪ್ಪದ ಸಂಸದೆ ಟ್ವಿಟರ್‌ನಲ್ಲಿ 'ಡೆಕಾಥ್ಲಾನ್ ಇಂಡಿಯಾ' ಸಂಸ್ಥೆಯನ್ನು ಟ್ಯಾಗ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಅನ್ಸಾಲ್‌ ಪ್ಲಾಜಾದ ಡೆಕಾಥ್ಲಾನ್‌ ಇಂಡಿಯಾದಲ್ಲಿ ನನ್ನ ತಂದೆಗಾಗಿ ಷರಾಯಿಗಳನ್ನು ₹1,499ಕ್ಕೆ ನಗದು ನೀಡಿ ಖರೀದಿಸಲು ಮುಂದಾದೆ. ಆದರೆ, ಖರೀದಿಗೆ ನನ್ನ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ಐಡಿ ನಮೂದಿಸಬೇಕು ಎಂದು ಅಲ್ಲಿನ ಮ್ಯಾನೇಜರ್‌ ಕೇಳಿದರು. ಡೆಕಾಥ್ಲಾನ್‌ ಇಂಡಿಯಾ, ನೀವು ಈ ರೀತಿ ಒತ್ತಾಯ ಮಾಡುವ ಮೂಲಕ ಗೋಪ್ಯತೆ ಮತ್ತು ಗ್ರಾಹಕರ ಕಾನೂನುಗಳನ್ನು ಉಲ್ಲಂಘಿಸಿರುವಿರಿ. ನಾನೀಗ ಮಳಿಗೆಯಲ್ಲಿಯೇ ಇದ್ದೇನೆ' ಎಂದು ಮಹುವಾ ಮೊಯಿತ್ರಾ ಇಂದು ಮಧ್ಯಾಹ್ನ ಟ್ವೀಟಿಸಿದ್ದಾರೆ.

ADVERTISEMENT

ಅವರ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ, ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ಅವರಿಗೆ ಸಂದೇಶ ಕಳುಹಿಸಿ, ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನೀಡಬೇಡಿ ಎಂದು ಸಲಹೆ ನೀಡಿದ್ದರು. ಆ ಸಂದೇಶದ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡಿದ್ದಾರೆ.

ಅಂತಿಮವಾಗಿ ಆ ಮಳಿಗೆಯ ಮ್ಯಾನೇಜರ್‌, ತನ್ನದೇ ಮೊಬೈಲ್‌ ಸಂಖ್ಯೆಯನ್ನು ನಮೂದಿಸುವ ಮೂಲಕ ಮಹುವಾ ಮೊಯಿತ್ರಾ ಅವರನ್ನು ಷರಾಯಿ ಖರೀದಿಯೊಂದಿಗೆ ಹೊರ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಡೆಕಾಥ್ಲಾನ್‌ ಇಂಡಿಯಾ ಈ ಕುರಿತು ಪುನರ್ ವ್ಯವಸ್ಥೆ ರೂಪಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

'ಬ್ರಿಟನ್‌ನ ಡೆಕಾಥ್ಲಾನ್‌ನಲ್ಲೂ ನಾನು ವಸ್ತುಗಳನ್ನು ಖರೀದಿಸಿದ್ದು, ಅಲ್ಲಿ ಮೊಬೈಲ್‌ ಸಂಖ್ಯೆಯನ್ನು ಕೇಳುವುದಿಲ್ಲ. ಡಿಜಿಟಲ್‌ ರೂಪದಲ್ಲಿ ರಶೀದಿ ಬೇಕಾದರೆ ಮಾತ್ರ ಇಮೇಲ್‌ ಐಡಿ ಕೊಡಬೇಕಾಗುತ್ತದೆ. ಭಾರತದಲ್ಲಿನ ಡೆಕಾಥ್ಲಾನ್‌ ಮಳಿಗೆಗಳಲ್ಲಿ ಮಾತ್ರವೇ ಗ್ರಾಹಕರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ' ಎಂದು ಮತ್ತೊಂದು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಮಹುವಾ ಮೊಯಿತ್ರಾ ಅವರ ಪೋಸ್ಟ್‌ಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.