ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋಲ್ಕತ್ತ ಪೊಲೀಸ್ ಆಯುಕ್ತ ಹಾಗೂ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸುಖೇಂದು ಶೇಖರ್ ರಾಯ್ ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಯ್, 'ಸಿಬಿಐ ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಿ. ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವದಂತಿ ಹಬ್ಬಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಲು ಕಾಲೇಜಿನ ಮಾಜಿ ಪಾಂಶುಪಾಲ ಮತ್ತು ಪೊಲೀಸ್ ಕಮಿಷನರ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು' ಎಂದು ಒತ್ತಾಯಿಸಿದ್ದಾರೆ.
ವೈದ್ಯ ವಿದ್ಯಾರ್ಥಿನಿಯ ಶವ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಆಗಸ್ಟ್ 9ರಂದು ಪತ್ತೆಯಾಗಿತ್ತು. ಅದೇ ದಿನ ಬೆಳಿಗ್ಗೆ 'ನಮಗೆ ಕರೆ ಮಾಡಿದ್ದ ಆಸ್ಪತ್ರೆಯವರು, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು' ಎಂದು ಸಂತ್ರಸ್ತೆಯ ಪೋಷಕರು ಹೇಳಿಕೆ ನೀಡಿದ್ದರು. ಆದರೆ, ಕೋಲ್ಕತ್ತ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರು, ಸಂತ್ರಸ್ತೆಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರಿಗೆ ಯಾವೊಬ್ಬ ಪೊಲೀಸ್ ಸಹ ಕರೆ ಮಾಡಿ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಪರಾಧ ಪ್ರಕರಣ ವರದಿಯಾಗುತ್ತಿದ್ದಂತೆ, ಕಾಲೇಜಿನ ಪ್ರಾಂಶುಪಾಲ ಸಂದೀಪ್ ಘೋಷ್ ಅವರು ರಾಜೀನಾಮೆ ನೀಡಿದ್ದಾರೆ. ಅವರನ್ನು ಸಿಬಿಐ ತಂಡ ಶುಕ್ರವಾರ ಹಾಗೂ ಶನಿವಾರ ಸುದೀರ್ಘ ವಿಚಾರಣೆ ನಡೆಸಿದೆ.
ಕೃತ್ಯ ನಡೆದಿರುವ ಕಾಲೇಜಿನಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ವಿರೋಧ ಪಕ್ಷಗಳ ನಾಯಕರು ಹಾಗೂ ಸಾರ್ವಜನಿಕರು ಕಿಡಿಕಾರಿದ್ದಾರೆ. 'ಇದು ಸಾಕ್ಷ್ಯ ನಾಶ ಮಾಡುವ ಯತ್ನ' ಎಂದು ಆರೋಪಿಸಿದ್ದಾರೆ.
ಈ ಬಗ್ಗೆಯೂ ಪ್ರಶ್ನಿಸಿರುವ ಟಿಎಂಸಿ ನಾಯಕ, 'ಶವ ಪತ್ತೆಯಾದ ಸೆಮಿನಾರ್ ಸಭಾಂಗಣವನ್ನು ಧ್ವಂಸ ಮಾಡಿರುವುದೇಕೆ? ತನಿಖೆಗೆ ಶ್ವಾನದಳವನ್ನು ಮೂರು ದಿನ ತಡವಾಗಿ ಬಳಸಿಕೊಂಡಿದ್ದು ಏಕೆ?' ಎಂದು ಕೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್ ಎಂಬಾತನನ್ನು ತಕ್ಷಣವೇ ಬಂಧಿಸಲಾಗಿದೆ. ಆದಾಗ್ಯೂ, ಪೊಲೀಸರು ಸೂಕ್ತರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಹೀಗಾಗಿ, ಕಾನೂನಿನ ಮೇಲೆ ಭರವಸೆ ಮೂಡಿಸುವ ಸಲುವಾಗಿ, ಕಲ್ಕತ್ತ ಹೈಕೋರ್ಟ್ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಿದೆ. ತನಿಖೆ ಪ್ರಗತಿಯಲ್ಲಿದೆ.
ಸುಖೇಂದು ಹೇಳಿಕೆಗೆ ವಿರೋಧ, ಬೆಂಬಲ
ಸಂಸದ ಸುಖೇಂದು ಶೇಖರ್ ರಾಯ್ ಅವರ ಬೇಡಿಕೆಯನ್ನು ಟಿಎಂಸಿ ನಾಯಕರೇ ವಿರೋಧಿಸಿದ್ದಾರೆ. ಕೃತ್ಯ ಬೆಳಕಿಗೆ ಬಂದಾಗಿನಿಂದ ಪೊಲೀಸ್ ಆಯುಕ್ತರು ಅಗತ್ಯವಿರುವ ಎಲ್ಲ ಕ್ರಮಗಳನ್ನು ಶ್ರದ್ಧೆಯಿಂದ ಕೈಗೊಂಡಿದ್ದಾರೆ ಎಂದು ಟಿಎಂಸಿಯ ಕುನಾಲ್ ಘೋಷ್ ಹೇಳಿದ್ದಾರೆ.
'ಸುಖೇಂದು ಅವರು ಅಪರಾಧದ ವಿರುದ್ಧ ಪ್ರತಿಭಟಿಸುವುದು ಸರಿ. ಆದರೆ, ಅವರ ಬೇಡಿಕೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಅಪರಾಧವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂಬುದಾಗಿ ಸುಖೇಂದು ಅವರು ಧ್ವನಿ ಎತ್ತಿರುವುದು ಪ್ರಶಂಸನೀಯ ಎಂದು ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿದೆ. ಆ ಪಕ್ಷ ವಕ್ತಾರ ಸೌಮ್ಯ ಐಚ್ ರಾಯ್ ಅವರು, 'ಆಡಳಿತ ಪಕ್ಷದವರೇ ಆಗಿದ್ದರೂ ಸುಖೇಂದು ಅವರು ಕೈಗೊಂಡ ನಿಲುವಿಗಾಗಿ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.
ಸುಖೇಂದು ಅವರ ಬೇಡಿಕೆಗಳನ್ನೇ ತಮ್ಮ ಪಕ್ಷದ ಆರಂಭದಿಂದಲೂ ಹೇಳುತ್ತಾ ಬಂದಿದೆ ಎಂದು ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.