ADVERTISEMENT

TN | ಪೊಲೀಸ್, ಅಗ್ನಿಶಾಮಕ ದಳಕ್ಕೆ ಭರಪೂರ ಘೋಷಣೆಗಳ ಪ್ರಕಟಿಸಿದ CM ಸ್ಟಾಲಿನ್

ಪಿಟಿಐ
Published 29 ಜೂನ್ 2024, 16:23 IST
Last Updated 29 ಜೂನ್ 2024, 16:23 IST
<div class="paragraphs"><p>ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಾತನಾಡಿದರು</p></div>

ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಾತನಾಡಿದರು

   

ಪಿಟಿಐ ಚಿತ್ರ

ಚೆನ್ನೈ: ಅಪಘಾತ ಮುಕ್ತ ನಗರವನ್ನಾಗಿ ಪರಿವರ್ತಿಸಲು ಕೊಯಮತ್ತೂರಿಗೆ ₹5ಕೋಟಿಯ ಕ್ರಿಯಾಯೋಜನೆಯೊಂದಿಗೆ ಪೊಲೀಸ್, ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ತಂಡಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭರಪೂರ ಘೋಷಣೆಗಳನ್ನು ಪ್ರಕಟಿಸಿದ್ದಾರೆ.

ADVERTISEMENT

ಕೊಳತ್ತೂರ್, ಕೆಳಂಬಾಕ್ಕಂ, ಸೆಂಗುಂಡ್ರಮ್‌ನಲ್ಲಿ ಮಹಿಳಾ ಪೊಲೀಸರೇ ನಿರ್ವಹಿಸುವ ಠಾಣೆಗಳ ಸ್ಥಾಪನೆ, ತಾಂಬರಮ್‌ ಪೊಲೀಸ್‌ ಆಯುಕ್ತರ ಕಚೇರಿಗೆ ಹೊಸ ಕಟ್ಟಡ, ಪೊಲೀಸರು ಕರ್ತವ್ಯದಲ್ಲಿರುವಾಗ ಪ್ರಾಣ ಕಳೆದುಕೊಂಡರೆ ಎಕ್ಸ್‌ಗ್ರೇಷಿಯಾ ಪ್ರಮಾಣ ಹೆಚ್ಚಳ, ಜತೆಗೆ ಗಾಯಗೊಂಡರೆ ಹಾಗೂ ಅಂಗಾಂಗ ಊನವಾದರೆ ದೊಡ್ಡ ಮೊತ್ತದ ಪರಿಹಾರವನ್ನು ಘೋಷಿಸಿದ್ದಾರೆ.

ಗೃಹ ರಕ್ಷಕ ದಳದ ಸಿಬ್ಬಂದಿ ಪ್ರಾಣ ಕಳೆದುಕೊಂಡರೆ ಕುಟುಂಬಕ್ಕೆ ಈ ಹಿಂದೆ ನೀಡಲಾಗುತ್ತಿದ್ದ ₹15 ಸಾವಿರ ಪರಿಹಾರವನ್ನು ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗಾಯಗೊಂಡರೆ ಪರಿಹಾರ ಮೊತ್ತ ₹10 ಸಾವಿರದಿಂದ ₹50 ಸಾವಿರಕ್ಕೆ ಏರಿಸಲಾಗಿದೆ. ತಾಂಜಾವೂರ್‌ನಲ್ಲಿ ₹5.1 ಕೋಟಿಯಲ್ಲಿ ವಿಧಿವಿಜ್ಞಾನ ಇಲಾಖೆಯ ಘಟಕ ಸ್ಥಾಪನೆ ಘೋಷಿಸಿದ್ದಾರೆ.

ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ಇಲಾಖೆಗೆ 1,500 ರಕ್ಷಕ ಕವಚಗಳು ಮತ್ತು 3 ಸಾವಿರ ರಕ್ಷಣಾ ಸಾಮಗ್ರಿಗಳ ಖರೀದಿಗೆ ₹4.5 ಕೋಟಿ ಘೋಷಿಸಿದ್ದಾರೆ. ರಾಜ್ಯದ ಏಳು ಸ್ಥಳಗಳಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಾಣ ಹಾಗೂ ಆರು ವಿಪತ್ತು ನಿರ್ವಹಣಾ ಕೇಂದ್ರಗಳ ಕಚೇರಿ ಸ್ಥಾಪನೆಯನ್ನು ಸ್ಟಾಲಿನ್ ಘೋಷಿಸಿದ್ದಾರೆ.

ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಆರೋಗ್ಯ ವಿಮೆಯನ್ನು ಪರಿಷ್ಕರಿಸಿದ್ದು, ನೌಕರರ ಪಾಲಕರನ್ನೂ ಒಳಗೊಳ್ಳುವಂತೆ ಯೋಜನೆ ರೂಪಿಸಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

‘ಈ ವರ್ಷ ಇಲಾಖೆಗೆ ನೂರು ಘೋಷಣೆಗಳನ್ನು ಮಾಡಲಾಗಿದ್ದು ಇವುಗಳಲ್ಲಿ ಕೆಲವಷ್ಟನ್ನೇ ಈವರೆಗೂ ಜಾರಿಗೊಳಿಸಲಾಗಿದೆ. ವಿಧಾನಸಭಾಕ್ಷರು ಉಳಿದವುಗಳನ್ನು ಪರಿಗಣಿಸಿ ಸದನದ ಕಡತಗಳಿಗೆ ಸೇರಿಸುವಂತೆ ನಿರ್ದೇಶಿಸಬೇಕು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

‘ನಮ್ಮ ಗುರಿ ದೊಡ್ಡದು, ನೀತಿಗಳು ವಿಶಾಲ. ಜತೆಗೆ ನಮ್ಮ ಪಯಣವೂ ಸುದೀರ್ಘವಾಗಿದೆ. ಜನರ ಆಶೋತ್ತರಗಳನ್ನು ಪೂರೈಸುವ ಜವಾಬ್ದಾರಿ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.