ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಖ್ಯಾತ ಗಾಯಕ ಟಿ.ಎಂ. ಕೃಷ್ಣ ಅವರು ಪ್ರಗತಿಪರ ಸಿದ್ಧಾಂತವನ್ನು ಹೊಂದಿದ್ದಕ್ಕಾಗಿಯೇ ಒಂದು ವರ್ಗದ ಜನರು ಅವರನ್ನು ದ್ವೇಷಿಸುತ್ತಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ಹೇಳಿದರು.
‘ಕೆಲವು ಜನರು ದ್ವೇಷ ಮತ್ತು ಇತರ ಬಾಹ್ಯ ಕಾರಣಗಳಿಂದ ಕೃಷ್ಣ ಅವರನ್ನು ಟೀಕಿಸುತ್ತಿರುವುದು ವಿಷಾದದ ಸಂಗತಿ. ಆದರೆ ಕೃಷ್ಣ ಅವರು ನಿರಂತರವಾಗಿ ಜನಸಾಮಾನ್ಯರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಕೃಷ್ಣ ಅವರ ಅಮೋಘ ಕೊಡುಗೆಯನ್ನು ಪರಿಗಣಿಸಿ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಅಕಾಡೆಮಿಯ ಆಡಳಿತ ಮಂಡಳಿಯನ್ನು ಶ್ಲಾಘಿಸುತ್ತೇನೆ’ ಎಂದೂ ಹೇಳಿದ್ದಾರೆ.
ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ವಿವಾದದಲ್ಲಿ ಪೆರಿಯಾರ್ ಅವರನ್ನು ಎಳೆದು ತರುವುದು ಮತ್ತು ಸುಧಾರಣೆಗೆ ಶ್ರಮಿಸಿದ ನಾಯಕನನ್ನು ಟೀಕಿಸುವುದು ಸರಿಯಾದ ನಡೆ ಅಲ್ಲ. 75 ವರ್ಷಗಳ ಕಾಲ ಪೆರಿಯಾರ್ ಅವರು ಶಾಂತಿ ಮಾರ್ಗದಲ್ಲಿ ಮಾನವೀಯತೆ ಮತ್ತು ಮಹಿಳೆಯರ ಹಕ್ಕುಗಳ ಪರ ಹೋರಾಡಿದರು. ಪೆರಿಯಾರ್ ಅವರ ನಿಸ್ವಾರ್ಥ ಜೀವನ ಮತ್ತು ಚಿಂತನೆಗಳ ಬಗ್ಗೆ ಅರಿವಿರುವ ಯಾರೂ ಅವರತ್ತ ಕೆಸರು ಎರಚುವ ಪ್ರಯತ್ನ ಮಾಡುವುದಿಲ್ಲ’ ಎಂದು ಹೇಳಿದ್ದಾರೆ
‘ಸಂಕುಚಿತ ಮನೋಭಾವದ ರಾಜಕೀಯವನ್ನು ಸಂಗೀತ ಜೊತೆ ತಳುಕುಹಾಕದಿರಿ’ ಎಂದೂ ಸ್ಟಾಲಿನ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.