ಚೆನ್ನೈ (ಪಿಟಿಐ): ತಮಿಳುನಾಡಿನ ಪ್ರಬಲ ರಾಜಕೀಯ ಪಕ್ಷ ಡಿಎಂಕೆಯ ಅಧ್ಯಕ್ಷ ಕರುಣಾನಿಧಿ ಮರೆಯಾದ ಬಳಿಕ ಉತ್ತರಾಧಿಕಾರಕ್ಕಾಗಿ ಸಂಘರ್ಷ ಆರಂಭವಾಗಬಹುದೇ? ಮಗ ಎಂ.ಕೆ.ಸ್ಟಾಲಿನ್ ತಮ್ಮ ಉತ್ತರಾಧಿಕಾರಿ ಎಂದು ಬದುಕಿದ್ದಾಗಲೇ ಕರುಣಾನಿಧಿ ಘೋಷಿಸಿದ್ದರು. ಹಾಗಿದ್ದರೂ, ಪಕ್ಷದ ನಿಯಂತ್ರಣ ಸ್ಟಾಲಿನ್ ಕೈಯಲ್ಲಿಯೇ ಉಳಿಯಬಹುದೇ?
ಪಕ್ಷದ ಮೇಲೆ ಅರ್ಧ ಶತಮಾನ ಬಿಗಿ ಹಿಡಿತ ಸಾಧಿಸಿದ್ದ ತಲೈವರ್ (ನಾಯಕ) ನಿಧನರಾದ ಬಳಿಕ ಕಾರ್ಯಕರ್ತರ ಮುಂದೆ ಈ ಪ್ರಶ್ನೆಗಳಿವೆ.
ಕರುಣಾನಿಧಿ ಹಿರಿಯ ಮಗ ಎಂ.ಕೆ. ಅಳಗಿರಿ ಮತ್ತು ಕಿರಿಯ ಮಗ ಎಂ.ಕೆ.ಸ್ಟಾಲಿನ್ ನಡುವೆ ಪಕ್ಷದ ಮೇಲಿನ ಹಿಡಿತಕ್ಕಾಗಿ ಕೆಲವು ವರ್ಷಗಳಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಯುಪಿಎ ಸರ್ಕಾರದಲ್ಲಿ ಅಳಗಿರಿ ಸ್ವಲ್ಪ ಕಾಲ ಸಚಿವರಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ 2014ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಅಳಗಿರಿ ಮುಂಗೋಪಕ್ಕೆ ಹೆಸರುವಾಸಿ. ಪಕ್ಷದಿಂದ ಉಚ್ಚಾಟನೆಯಾದ ಬಳಿಕ ಅವರು ತಮ್ಮ ತಂದೆಯ ವಿರುದ್ಧವೇ ತಿರುಗಿ ಬಿದ್ದಿದ್ದರು. ‘ಸ್ವಾಮೀಜಿಯು ತನ್ನ ಉತ್ತರಾಧಿಕಾರಿಯನ್ನು ನೇಮಿಸುವಂತೆ ಮಾಡಲು ಡಿಎಂಕೆಯೇನು ಮಠವೇ’ ಎಂದು ಅವರು ಪ್ರಶ್ನಿಸಿದ್ದರು.
ಉಚ್ಚಾಟನೆಯ ಬಳಿಕ ಅಳಗಿರಿಯವರು ದೂರದ ಮದುರೈಯಲ್ಲಿ ನೆಲೆಸಿದ್ದರು ಮತ್ತು ಅದು ಅವರ ರಾಜಕೀಯ ವನವಾಸವೇ ಆಗಿತ್ತು. ಕರುಣಾನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕುಟುಂಬದ ಜತೆಗೆ ಅಳಗಿರಿ ಅವರೂ ಇದ್ದರು.
ಉತ್ತರಾಧಿಕಾರಕ್ಕಾಗಿ ಮತ್ತೊಮ್ಮೆ ಸಂಘರ್ಷ ಉಂಟಾಗುವ ಸಾಧ್ಯತೆ ಇಲ್ಲ. ಎಲ್ಲವೂ ತೀರ್ಮಾನವಾಗಿದೆ ಎಂದು ಡಿಎಂಕೆಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಜುಲೈ 28ರಂದು ಕರುಣಾನಿಧಿ ಆಸ್ಪತ್ರೆಗೆ ದಾಖಲಾದ ಬಳಿಕ ಮಂಗಳವಾರ ಅವರು ನಿಧನರಾಗುವವರೆಗೆ ಕುಟುಂಬ ಒಗ್ಗಟ್ಟು ಪ‍್ರದರ್ಶಿಸಿದೆ. ಸಹೋದರರಿಬ್ಬರೂ ಮುಕ್ತವಾಗಿ ಮಾತನಾಡಿಕೊಂಡಿದ್ದಾರೆ. ಹಾಗಾಗಿ ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ, ವಿವಾದವೂ ಇಲ್ಲ ಎಂದು ಅವರು ವಿವರಿಸಿದ್ದಾರೆ.
ಸ್ಟಾಲಿನ್ ಅವರೇ ಪಕ್ಷದ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಮತ್ತು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ರಾಜಕೀಯ ವಿಶ್ಲೇಷಕ ಮತ್ತು ಹಿರಿಯ ಪತ್ರಕರ್ತ ಶ್ಯಾಮ್ ಷಣ್ಮುಗಂ ಅವರು ಬೇರೆಯೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಉತ್ತರಾಧಿಕಾರ ಯುದ್ಧ ತಕ್ಷಣವೇ ಆರಂಭವಾಗಲಿದೆ. ಸಹೋದರರ ನಡುವಣ ಸಂಘರ್ಷ ಎಂದಿಗೂ ಕೊನೆಯಾಗದು. ಸ್ಟಾಲಿನ್ ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ ಮಾಡಬೇಕು’ ಎಂದು ಅವರು ಹೇಳುತ್ತಾರೆ.
‘ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಕಾರ್ಯಸೂಚಿ. ಕರುಣಾನಿಧಿ ಸಾವಿನ ಬಳಿಕ ಡಿಎಂಕೆಯನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸಲಿದೆ. ಜಯಲಲಿತಾ ನಿಧನರಾದ ಬಳಿಕ ಎಐಎಡಿಎಂಕೆಯನ್ನು ದುರ್ಬಲಗೊಳಿಸುವ ಯತ್ನವನ್ನೂ ಬಿಜೆಪಿ ಮಾಡಿದೆ. ಕರುಣಾನಿಧಿ ಅವರು ಡಿಎಂಕೆ ಮತ್ತು ಜಯಲಲಿತಾ ಅವರು ಎಐಎಡಿಎಂಕೆಯನ್ನು ಒಟ್ಟಾಗಿರಿಸಿದ್ದ ಶಕ್ತಿಯಾಗಿದ್ದರು’ ಎಂದು ಷಣ್ಮುಗಂ ವಿವರಿಸಿದ್ದಾರೆ.
ತಮ್ಮ ಪಾಲು ತಮಗೆ ಸಿಗಲೇಬೇಕು ಎಂಬ ಹಕ್ಕೊತ್ತಾಯವನ್ನು ಅಳಗಿರಿ ಮುಂದಿಡಲಿದ್ದಾರೆ ಎಂದು ತಮಿಳುನಾಡು ರಾಜಕೀಯವನ್ನು ಅತ್ಯಂತ ಹತ್ತಿರದಿಂದ ಬಲ್ಲ ಷಣ್ಮುಗಂ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕಳೆದ ಬಾರಿ ಡಿಎಂಕೆ ಅಧಿಕಾರಕ್ಕೆ ಬಂದಾಗ ದಕ್ಷಿಣದ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಅಳಗಿರಿ ಕೊಡುಗೆ ಇತ್ತು. ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡೇ ಪಕ್ಷದ ಮುಖವಾಣಿಯ ಮದುರೈ ಆವೃತ್ತಿಯ ಉಸ್ತುವಾರಿ ವಹಿಸಿ ಅಳಗಿರಿಯನ್ನು ಅಲ್ಲಿಗೆ ಕರುಣಾನಿಧಿ ಕಳುಹಿಸಿದ್ದರು. ದಕ್ಷಿಣದ ಜಿಲ್ಲೆಗಳ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅಳಗಿರಿಗೆ ಆ ಭಾಗದಲ್ಲಿ ಪಕ್ಷದ ಮೇಲೆ ಹಿಡಿತವಿದೆ. ಹಾಗಾಗಿ ಅಳಗಿರಿಯನ್ನು ನಿರ್ಲಕ್ಷಿಸುವುದು ಸುಲಭವಲ್ಲ ಎಂದು ಷಣ್ಮುಗಂ ಅಭಿಪ್ರಾಯಪಡುತ್ತಾರೆ.
ಕನಿಮೊಳಿಯ ಪಾಲೇನು
ರಾಜ್ಯಸಭಾ ಸದಸ್ಯೆಯಾಗಿರುವ ಮಲಸಹೋದರಿ ಕನಿಮೊಳಿ ಅವರು ಸಾಕಷ್ಟು ಜನಪ್ರಿಯತೆ ಇರುವ ನಾಯಕಿ. ಮಹತ್ವಾಕಾಂಕ್ಷಿಯೂ ಹೌದು. ಹಾಗಾಗಿ ಪಕ್ಷದ ವ್ಯವಹಾರಗಳಲ್ಲಿ ತಮ್ಮ ಮಾತಿಗೂ ತಕ್ಕ ಬೆಲೆ ಸಿಗಬೇಕು ಎಂದು ಅವರೂ ಬಯಸಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ದ್ವೇಷದ ಕಿಡಿ
ಅಳಗಿರಿ ಮತ್ತು ಸ್ಟಾಲಿನ್ ನಡುವೆ ಅಧಿಕಾರಕ್ಕಾಗಿ ದೀರ್ಘ ಕಾಲದಿಂದ ಸಂಘರ್ಷ ನಡೆಯುತ್ತಿತ್ತು. ಆದರೆ ಅದು 2014ರ ಜನವರಿಯಲ್ಲಷ್ಟೇ ಬಹಿರಂಗವಾಯಿತು. ‘ಮೂರು ತಿಂಗಳಲ್ಲಿ ಸ್ಟಾಲಿನ್ ಸಾಯುತ್ತಾರೆ’ ಎಂದು ಅಳಗಿರಿ ಹೇಳಿದ್ದಾಗಿ ಸುದ್ದಿಯಾಯಿತು. ಆದರೆ ಅಂತಹ ಹೇಳಿಕೆ ನೀಡಿಯೇ ಇಲ್ಲ ಎಂದು ಅಳಗಿರಿ ಆಗಿನಿಂದಲೂ ಹೇಳುತ್ತಿದ್ದಾರೆ.
ಆದರೆ ಇದು ಕರುಣಾನಿಧಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ‘ಸ್ಟಾಲಿನ್ ಮೇಲೆ ಅಳಗಿರಿಗೆ ಏನೋ ದ್ವೇಷ ಇದೆ. ಸ್ಟಾಲಿನ್ ಮೂರು ತಿಂಗಳಲ್ಲಿ ಸಾಯುವುದಾಗಿ ಅಳಗಿರಿ ಹೇಳಿದ್ದಾನೆ. ಇಂತಹ ಮಾತನ್ನು ಯಾವ ತಂದೆಯೂ ಸಹಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಅಳಗಿರಿಯನ್ನು ಉಚ್ಚಾಟಿಸುವ ಸಂದರ್ಭದಲ್ಲಿ ಕರುಣಾನಿಧಿ ಹೇಳಿದ್ದರು.
2016ರ ವಿಧಾನಸಭೆ ಚುನಾವಣೆ ವೇಳೆ ಸ್ಟಾಲಿನ್ ಭಾರಿ ಯಾತ್ರೆಯೊಂದನ್ನು ನಡೆಸಿದ್ದರು. ‘ಇದು ಹಾಸ್ಯ ಕಾರ್ಯಕ್ರಮ’ ಎಂದು ಅಳಗಿರಿ ಹಂಗಿಸಿದ್ದರು. ಕಳೆದ ವರ್ಷ ಚೆನ್ನೈನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ಸ್ಟಾಲಿನ್ ನಾಯಕತ್ವದಲ್ಲಿ ಡಿಎಂಕೆ ಯಾವ ಚುನಾವಣೆಯನ್ನೂ ಗೆಲ್ಲದು ಎಂದು ಅಳಗಿರಿ ಹೇಳಿದ್ದರು.
ಮೆಚ್ಚಿನ ಮಗ ಸ್ಟಾಲಿನ್
ಸಣ್ಣ ವಯಸ್ಸಿನಿಂದಲೇ ಪಕ್ಷದ ವಿವಿಧ ಹುದ್ದೆಗಳಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಮೇಲೆ ಬಂದ ಸ್ಟಾಲಿನ್ ಮೇಲೆ ಕರುಣಾನಿಧಿಗೆ ವಿಶೇಷ ಮಮತೆ ಇತ್ತು. ಪಕ್ಷದ ಕಾರ್ಯಾಧ್ಯಕ್ಷರಾಗುವ ಮೊದಲು ಯುವ ವಿಭಾಗದ ಕಾರ್ಯದರ್ಶಿ ಮತ್ತು ಪಕ್ಷದ ಖಜಾಂಚಿಯಾಗಿ ಸ್ಟಾಲಿನ್ ಕೆಲಸ ಮಾಡಿದ್ದರು. ಮೂರು ದಶಕಗಳಿಂದ ಪಕ್ಷದ ಮುಂಚೂಣಿ ಮುಖಂಡನಾಗಿ ಸ್ಟಾಲಿನ್ ಗುರುತಿಸಿಕೊಂಡಿದ್ದಾರೆ.
ಆದರೆ, ಅಳಗಿರಿ ನೇಪಥ್ಯದಲ್ಲಿಯೇ ಕೆಲಸ ಮಾಡುತ್ತಿದ್ದರು. 2009ರಲ್ಲಿ ತಿರುಮಂಗಲಂ ಉಪಚುನಾವಣೆಯಲ್ಲಿ ಡಿಎಂಕೆ ಗೆದ್ದ ಬಳಿಕ ಅವರನ್ನು ಪಕ್ಷದ ದಕ್ಷಿಣ ವಲಯದ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.