ADVERTISEMENT

50 ಪೈಸೆಗೆ ಟಿ–ಶರ್ಟ್‌! ಬಲವಂತದಿಂದ ಅಂಗಡಿ ಮುಚ್ಚಿಸಿದ ಪೊಲೀಸರು

ಐಎಎನ್ಎಸ್
Published 21 ಅಕ್ಟೋಬರ್ 2021, 13:34 IST
Last Updated 21 ಅಕ್ಟೋಬರ್ 2021, 13:34 IST
ಪ್ರಾತಿನಿಧ ಚಿತ್ರ
ಪ್ರಾತಿನಿಧ ಚಿತ್ರ    

ತಿರುಚಿ (ತಮಿಳುನಾಡು): ತಿರುಚಿಯಲ್ಲಿ ಬಟ್ಟೆ ಅಂಗಡಿಯೊಂದನ್ನು ಪೊಲೀಸರು ಬಲವಂತದಿಂದ ಮುಚ್ಚಿಸಿದ ಪ್ರಸಂಗವೊಂದು ಗುರುವಾರ ನಡೆದಿದೆ.

ಬಟ್ಟೆ ಅಂಗಡಿಯ ಉದ್ಘಾಟನೆಯ ಹಿನ್ನೆಯಲ್ಲಿ ಅದರ ಮಾಲೀಕರು ಟಿ–ಶರ್ಟ್‌ಗಳನ್ನು ಕೇವಲ 50 ಪೈಸೆಗೆ ನೀಡುವುದಾಗಿ ಘೋಷಿಸಿದ್ದರು. ಈ ಕೊಡುಗೆ ತಿಳಿದ ಜನ ಭಾರಿ ಪ್ರಮಾಣದಲ್ಲಿ ಅಂಗಡಿ ಎದುರು ಜಮಾಯಿಸಿದ್ದರು. ಹೀಗಾಗಿ ಪೊಲೀಸರು ಬಟ್ಟೆ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.

ತಿರುಚಿಯ ಮಣಪ್ಪರೈನಲ್ಲಿ ಅಂಗಡಿ ಆರಂಭಿಸಿರುವ ಹಕೀಮ್‌ ಮೊಹಮದ್‌, ಉದ್ಘಾಟನೆ ದಿನದ ಕೊಡುಗೆ ಕುರಿತು ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದರು. ಸ್ಥಳೀಯ ವಾಟ್ಸಾಪ್‌ ಗುಂಪುಗಳಲ್ಲಿಯೂ ಇದರ ಬಗ್ಗೆ ಜಾಹೀರಾತನ್ನು ಹರಿಬಿಟ್ಟಿದ್ದರು. ಹೀಗಾಗಿ ಮಣಪ್ಪರೈನ ಅಂಗಡಿ ಎದುರು ಭಾರಿ ಜನರು ಸೇರಿದ್ದರು.

ADVERTISEMENT

ಉದ್ಘಾಟನಾ ದಿನದ ಕೊಡುಗೆಯನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಸೀಮಿತಗೊಳಿಸಿದ್ದರಿಂದ ಜನ ತಂಡೋಪತಂಡವಾಗಿ ಅಂಗಡಿ ಬಳಿಗೆ ಆಗಮಿಸಿದ್ದರು. ಪರಿಣಾಮವಾಗಿ ಟ್ರಾಫಿಕ್‌ ಜಾಮ್‌ ಆಗಿ ಸಮಸ್ಯೆ ಎದುರಾಗಿತ್ತು. ಮಧ್ಯಪ್ರವೇಶ ಮಾಡಿದ ಪೊಲೀಸರು ಅಂಗಡಿ ಮುಚ್ಚುವಂತೆ ಮಾಲೀಕರಿಗೆ ಸೂಚಿಸಿದರು. ಮಧ್ಯಾಹ್ನ 1 ಗಂಟೆ ನಂತರ ಅಂಗಡಿ ತೆರೆಯುವಂತೆ ತಿಳಿಸಿದರು.

‘1000 ಕಾಟನ್‌ ಟಿ–ಶರ್ಟ್‌ಗಳನ್ನು ಮಾರಾಟ ಮಾಡಲು ನಾವು ಉದ್ದೇಶಿಸಿದ್ದೆವು. ಆದರೆ, ಪೊಲೀಸರು ಅಂಗಡಿ ಬಾಗಿಲು ಮುಚ್ಚಿಸಿದ್ದರಿಂದ 100 ಟಿ–ಶರ್ಟ್‌ಗಳನ್ನು ಮಾತ್ರವೇ ಮಾರಾಟ ಮಾಡಿದ್ದೇವೆ. ಮಧ್ಯಾಹ್ನ 1 ಗಂಟೆ ನಂತರ ಹಲವರು 50 ಪೈಸೆಯೊಂದಿಗೆ ಅಂಗಡಿಗೆ ಬಂದಿದ್ದರು. ಆದರೆ, ಕೊಡುಗೆಯ ಅವಧಿ ಮುಗಿದಿದ್ದರಿಂದ ಅವರನ್ನು ವಾಪಸ್‌ ಕಳುಹಿಸಲಾಗಿದೆ,‘ ಎಂದು ಅಂಗಡಿ ಮಾಲಿಕ ಹಕೀಮ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.