ADVERTISEMENT

ತಿರುಪತಿ ಲಡ್ಡು ಪ್ರಕರಣ: ಪೂರೈಸಿದ ತುಪ್ಪಕ್ಕೆ ಸಿಕ್ಕಿದೆ ಪ್ರಮಾಣಪತ್ರ ಎಂದ ಸಂಸ್ಥೆ

ಪಿಟಿಐ
Published 20 ಸೆಪ್ಟೆಂಬರ್ 2024, 11:11 IST
Last Updated 20 ಸೆಪ್ಟೆಂಬರ್ 2024, 11:11 IST
   

ಚೆನ್ನೈ: ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಪೂರೈಕೆ ಮಾಡಲಾದ ತುಪ್ಪದ ಗುಣಮಟ್ಟವನ್ನು ಖಾತ್ರಿಪಡಿಸಿ ಪ್ರಾಧಿಕಾರವು ಪ್ರಮಾಣಪತ್ರ ನೀಡಿದೆ ಎಂದು ತಮಿಳುನಾಡು ಮೂಲದ ಎಆರ್ ಡೇರಿ ಶುಕ್ರವಾರ ಹೇಳಿದೆ.

ದಿಂಡಿಗಲ್‌ ಮೂಲದ ಡೇರಿಯ ವಕ್ತಾರರು ಈ ಮಾಹಿತಿ ತಿಳಿಸಿದ್ದು, ‘2024ರ ಜೂನ್ ಹಾಗೂ ಜುಲೈನಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡಲಾಗಿತ್ತು. ತುಪ್ಪದೊಂದಿಗೆ ಮಾನ್ಯತೆ ಪಡೆದ ಪ್ರಯೋಗಾಲಯದ ವರದಿಯನ್ನೂ ಕಳುಹಿಸಲಾಗಿತ್ತು’ ಎಂದು ತಿಳಿಸಿದೆ.

‘ಪೂರೈಕೆ ಮಾಡಲಾದ ತುಪ್ಪದಲ್ಲಿ ಯಾವುದೇ ಕಲಬೆರಕೆ ಮಾಡಿಲ್ಲ. ತಿರುಮಲ ತಿರುಪತಿ ದೇವಸ್ಥಾನಮ್ಸ್‌ಗೆ ತುಪ್ಪ ಪೂರೈಕೆ ಮಾಡಿದ ಸಂಸ್ಥೆಗಳಲ್ಲಿ ನಾವೂ ಒಬ್ಬರು. ನಾವು ತಯಾರಿಸುವ ತುಪ್ಪದ ಗುಣಮಟ್ಟ ಕುರಿತ ಪ್ರಮಾಣಪತ್ರವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಸಲ್ಲಿಸಿದ್ದೇವೆ’ ಎಂದಿದ್ದಾರೆ.

ADVERTISEMENT

‘ಸದ್ಯ ನಾವು ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡುತ್ತಿಲ್ಲ. ಈಗಲೂ ನಮ್ಮ ಡೇರಿಯ ಹೈನು ಪದಾರ್ಥವು ಎಲ್ಲೆಡೆ ಲಭ್ಯವಿದ್ದು, ಪರೀಕ್ಷೆ ನಡೆಸಬಹುದು’ ಎಂದಿದ್ದಾರೆ.

ತಿರುಪತಿ ‘ಲಡ್ಡು’ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆರೋಪವು, ಆಡಳಿತ ಪಕ್ಷವಾದ ಟಿಡಿಪಿ ಮತ್ತು ಪ್ರತಿಪಕ್ಷಗಳಾದ ವೈಎಸ್‌ಆರ್‌ಸಿಪಿ, ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಚಂದ್ರಬಾಬು ನಾಯ್ಡು ಅವರ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಅದರ ಸಮರ್ಥನೆಯಾಗಿ ಗುಜರಾತ್‌ನ ಜಾನುವಾರು ಪ್ರಯೋಗಾಲಯ ಎನ್‌ಡಿಡಿಬಿ ಕಾಫ್‌ ಲಿಮಿಟೆಡ್‌ನ ವರದಿಯನ್ನು ಟಿಡಿಪಿ ಬಿಡುಗಡೆ ಮಾಡಿತ್ತು.

ಲಡ್ಡುವನ್ನು ತಯಾರಿಸಲು ಬಳಸಿದ್ದ ತುಪ್ಪದ ಮಾದರಿಯಲ್ಲಿ ಗೋಮಾಂಸದ ಚರ್ಬಿಯ ಅಂಶವು ಪತ್ತೆಯಾಗಿದೆ ಎಂದು ದೃಢಪಡಿಸುವ ಪ್ರಯೋಗಾಲಯ ವರದಿಯನ್ನು ಟಿಡಿಪಿ ವಕ್ತಾರ ಆನಂ ವೆಂಕಟರಮಣ ರೆಡ್ಡಿ ಬಿಡುಗಡೆ ಮಾಡಿದ್ದರು.

‘ಈ ವರದಿಯ ಪ್ರಕಾರ, ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಪತ್ತೆಯಾಗಿದೆ. 2024ರ ಜುಲೈ 9ರಂದು ತುಪ್ಪದ ಮಾದರಿಯನ್ನು ಪಡೆಯಲಾಗಿತ್ತು. ಪ್ರಯೋಗಾಲಯದ ವರದಿಯು ಜುಲೈ 16ರಂದು ಬಂದಿದೆ’ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.