ನವದೆಹಲಿ: ‘ಭಾರತವನ್ನು ನಂಬರ್ 1 ಮಾಡುವ ನಮ್ಮ ರಾಷ್ಟ್ರೀಯ ಮಿಷನ್‌ಗೆ ಸೇರ ಬಯಸುವವರು 9510001000ಗೆ ಮಿಸ್ಡ್ ಕಾಲ್ ನೀಡಿ. ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯೋಣ’ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿತು. ಇದರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್, ನಂತರ ಎಎಪಿಯ ಮಹತ್ವಾಕಾಂಕ್ಷಿ ಅಭಿಯಾನದ ಬಗ್ಗೆ ಮಾತನಾಡಿದರು.
‘ನಾನು ಇಂದು ಸಂಖ್ಯೆಯೊಂದನ್ನು ನೀಡುತ್ತಿದ್ದೇನೆ. ನಮ್ಮ ಅಭಿಯಾನದಲ್ಲಿ ಸೇರಲು ಬಯಸುವವರು, ಭಾರತವನ್ನು ವಿಶ್ವದ ನಂಬರ್ 1 ರಾಷ್ಟ್ರವಾಗಿ, ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ನೋಡಲು ಬಯಸುವವರು 9510001000 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ’ ಎಂದು ಕೇಜ್ರಿವಾಲ್ ಹೇಳಿದರು.
2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಮಹತ್ವಾಕಾಂಕ್ಷೆಯ 'ಮೇಕ್ ಇಂಡಿಯಾ ನಂ 1' ಅಭಿಯಾನಕ್ಕೆ ಚಾಲನೆ ನೀಡಿದ್ದರು.
ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ’ಭಾರತ ಅಭಿವೃದ್ಧಿ ಹೊಂದಬೇಕಾದರೆ, ಈಗ ಆಡಳಿತ ನಡೆಸುತ್ತಿರುವವರ ಕೈಗೆ ದೇಶವನ್ನು ಕೊಡಬಾರದು’ ಎಂದು ಹೇಳಿದ್ದರು.
ಉತ್ತಮ ಆಡಳಿತಕ್ಕಾಗಿ ಐದು ಅಂಶಗಳನ್ನು ಪ್ರಸ್ತಾಪಿಸಿದ ಅವರು, ಈ ಉದ್ದೇಶಕ್ಕಾಗಿ ಬೆಂಬಲ ಪಡೆಯಲು ದೇಶದಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.