ನವದೆಹಲಿ: ತಾಳ್ಮೆ, ಹೊಂದಾಣಿಕೆ ಮತ್ತು ಗೌರವ– ಇವು ವೈವಾಹಿಕ ಸಂಬಂಧದ ಆಧಾರಸ್ತಂಭಗಳು. ಪತಿ–ಪತ್ನಿ ಮಧ್ಯೆ ಸಣ್ಣ ಪುಟ್ಟ ವ್ಯಾಜ್ಯ ಮತ್ತು ಮನಸ್ತಾಪಗಳು ಸಾಮಾನ್ಯ. ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುವ ‘ಮದುವೆ’ ಮುರಿದು ಬೀಳಲು ಇವು ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಮಹಿಳೆಯೊಬ್ಬರು ಪತಿ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಆಲಿಸಿದ ಕೋರ್ಟ್, ಅವರ ಅರ್ಜಿಯನ್ನು ವಜಾಗೊಳಿಸಿ ಈ ರೀತಿ ಹೇಳಿದೆ.
‘ಹಲವು ಸಂದರ್ಭಗಳಲ್ಲಿ ವಿವಾಹಿತ ಮಹಿಳೆಯ ಪೋಷಕರು ಮತ್ತು ಹತ್ತಿರದ ಸಂಬಂಧಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಂಬಂಧವನ್ನು ಉಳಿಸುವ ಬದಲಿಗೆ, ಪುಟ್ಟ ಸಮಸ್ಯೆಯನ್ನು ದೊಡ್ಡದು ಮಾಡುತ್ತಾರೆ. ಇದರಿಂದ ವೈವಾಹಿಕ ಬಂಧವೇ ಮುರಿದು ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು, ಮಹಿಳೆ, ಆಕೆಯ ಪೋಷಕರು ಮತ್ತು ಸಂಬಂಧಿಕರಿಗೆ ಮೊದಲು ನೆನಪಾಗುವುದೇ ಪೊಲೀಸ್. ದಂಪತಿ ಮಧ್ಯೆ ಸಾಮರಸ್ಯ ಮೂಡುವ ಸಾಧ್ಯತೆ ಇದ್ದರೂ, ಪೊಲೀಸರ ಬಳಿ ದೂರು ತೆಗೆದುಕೊಂಡು ಹೋದ ನಂತರ ಆ ಸಾಧ್ಯತೆಯೂ ಕ್ಷೀಣವಾಗುತ್ತದೆ ಎಂದು ಹೇಳಿದರು.
‘ತಾಂತ್ರಿಕತೆ ಮತ್ತು ಅತ್ಯಂತ ಸೂಕ್ಷ್ಮ (ಹೈಪರ್ ಸೆನ್ಸಿಟಿವ್) ಸ್ವಭಾವವು ವಿವಾಹ ಬಂಧವನ್ನು ನಾಶಗೊಳಿಸಬಹುದು’ ಎಂದು ಅಭಿಪ್ರಾಯಪಟ್ಟರು.
‘ಮಕ್ಕಳು ವೈವಾಹಿಕ ಸಂಘರ್ಷದ ಮೊದಲ ಸಂತ್ರಸ್ತರು. ಪರಸ್ಪರ ದ್ವೇಷದಿಂದ ಜಗಳವಾಡುವ ದಂಪತಿಯ ‘ಮದುವೆ’ ಮುರಿದುಬೀಳಬಹುದು, ನಂತರ ಮಕ್ಕಳ ಕತೆ ಏನು ಎಂಬುದಾಗಿ ಕಿಂಚಿತ್ತೂ ಯೋಚನೆ ಮಾಡುವುದಿಲ್ಲ’ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.