ನವದೆಹಲಿ: ‘ಒಂದು ವರ್ಷದೊಳಗೆ ದೇಶದಾದ್ಯಂತವಿರುವ ಟೋಲ್ ಪ್ಲಾಜಾಗಳಲ್ಲಿರುವ ಬೂತ್‌ಗಳನ್ನು ತೆಗೆದು, ಆ ಜಾಗದಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲಾಗುವುದು‘ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ತಿಳಿಸಿದ ಸಚಿವರು, ‘ಒಂದು ವರ್ಷದೊಳಗೆ ದೇಶದಾದ್ಯಂತ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ. ವಾಹನಗಳ ಮೇಲಿರುವ ಜಿಪಿಎಸ್ ಚಿತ್ರ(ಇಮೇಜ್) ಆಧರಿಸಿ ಹಣವನ್ನು ಸಂಗ್ರಹಿಸಲಾಗುತ್ತದೆ‘ ಎಂದು ಅವರು ತಿಳಿಸಿದರು.
ಪ್ರಸ್ತುತ ಶೇ 93ರಷ್ಟು ವಾಹನಗಳು ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಪಾವತಿಸುತ್ತಿವೆ. ಶೇ 7ರಷ್ಟು ಜನರು, ದುಪ್ಪಟ್ಟು ಟೋಲ್ ಶುಲ್ಕ ಪಾವತಿಸುತ್ತಿದ್ದರೂ ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿಲ್ಲ ಎಂದು ಅವರು ಹೇಳಿದರು.
ಫಾಸ್ಟ್‌ಟ್ಯಾಗ್ ಬಳಸಿ ಟೋಲ್ ಪಾವತಿಸದ ವಾಹನಗಳ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಸಚಿವರು ಹೇಳಿದರು. ವಾಹನಗಳಿಗೆ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದೇ, ಟೋಲ್ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಗೂ ಜಿಎಸ್‌ಟಿಯನ್ನೂ ಪಾವತಿಸಿದಿರುವ ಪ್ರಕರಣಗಳೂ ಇವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗುಂತೆ 2016 ರಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಪರಿಚಯಿಸಲಾಯಿತು. ಈ ವರ್ಷದ ಫೆಬ್ರವರಿಯಿಂದ ಫಾಸ್ಟ್‌ಟ್ಯಾಗ್ ರಹಿತ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿಗೂ ಸರ್ಕಾರ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.