ನವದೆಹಲಿ: ಸರ್ಕಾರದ ನಿರ್ದೇಶನದಂತೆ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಸೋಮವಾರದಿಂದ ಪುನಾರಂಭಗೊಂಡಿದೆ. ಕೇಂದ್ರದ ಈ ನಡೆಯನ್ನು ಸಾರಿಗೆ ಒಕ್ಕೂಟಗಳು ವಿರೋಧಿಸಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಹೆದ್ದಾರಿ ಡೆವೆಲಪರ್‌ಗಳು ಟೋಲ್ ಪ್ಲಾಜಾಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಹಣ ಸಂಗ್ರಹಣೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಎಲ್ಲ ಪ್ಲಾಜಾಗಳಲ್ಲಿ ಸೋಮವಾರ ಮುಂಜಾನೆಯಿಂದಲೇ ಟೋಲ್ ಸಂಗ್ರಹಣೆ ಆರಂಭಿಸಲಾಗಿದೆ ಎಂದು ಹೆದ್ದಾರಿ ಡೆವೆಲಪರ್ ಸಂಸ್ಥೆ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವೆಲಪರ್ ತಿಳಿಸಿದೆ.
ಟೋಲ್ ಸಂಗ್ರಹ ಆರಂಭಿಸುವಂತೆ ನೋಡಲ್ ಏಜೆನ್ಸಿಗಳಿಂದ ನಮಗೆ ನಿರ್ದೇಶನ ಬಂದಿದೆ. ಇದು ಸಾರಿಗೆ ಕ್ಷೇತ್ರಕ್ಕೆ ಶುಭ ಸೂಚನೆ ಎಂದು ನಾವು ಭಾವಿಸಿದ್ದೇವೆ. ದೇಶ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದರ ಮುನ್ಸೂಚನೆ ಇದಾಗಿದೆ ಎಂದು ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್‌ನ ವಕ್ತರರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಈ ನಿರ್ಧಾರವನ್ನು ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ವಿರೋಧಿಸಿದೆ. ಇದು ದೇಶದ ರಾಬಿ ಕೋಯ್ಲು ಖರೀದಿ ಮತ್ತು ಸಂಗ್ರಹಣೆ ಮೇಲೆ ಪರಿಣಾಮ ಬೀರಲಿದೆ. ಜನ ಹಣವಿಲ್ಲದೇ ಪರಿತಪಿಸುತ್ತಿರುವ ಈ ಹೊತ್ತಿನಲ್ಲಿ ಟೋಲ್‌ಗೆ ತೆರಲು ಹಣ ಎಲ್ಲಿಂದ ತರುತ್ತಾರೆ? ಎಂದು ಪ್ರಶ್ನೆ ಮಾಡಿದೆ.
ಕೊರೊನಾ ವೈರಸ್ ಸಾಂಕ್ರಾಮಿಕಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸಾರಿಗೆ ಇಲಾಖೆಯು ಮಾರ್ಚ್ 25 ರಂದು ಟೋಲ್ ಸಂಗ್ರಹವನ್ನು ದೇಶದಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ, ಸೋಮವಾರ ಯಾವುದೇ ಸೂಚನೆಗಳಿಲ್ಲದೇ ಟೋಲ್ ಪುನಾರಂಭ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.