ನವದೆಹಲಿ: ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಟೋಲ್ ಸಂಗ್ರಹದ ಮೂಲಕ 2022–23ನೇ ಸಾಲಿನಲ್ಲಿ ₹48 ಸಾವಿರ ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವರಮಾನ ಪ್ರಮಾಣ ₹14,121 ಕೋಟಿ ಹೆಚ್ಚಾಗಿದೆ.
ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಕೇಳಿರುವ ಪ್ರಶ್ನೆಗೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಸಂಬಂಧ ಉತ್ತರ ನೀಡಿದರು. ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಟೋಲ್ ವಸೂಲಿ ಗಣನೀಯವಾಗಿ ಜಾಸ್ತಿ ಆಗಿದೆ ಎಂಬ ಅಂಶ ಉತ್ತರದಲ್ಲಿದೆ.
ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು 2016–17ರಿಂದ ಪ್ರಾರಂಭಿಸಲಾಯಿತು. ಶುಲ್ಕ ಪ್ಲಾಜಾಗಳ ಎಲ್ಲ ಲೇನ್‌ಗಳನ್ನು 2021ರಿಂದ ಫಾಸ್ಟ್ ಟ್ಯಾಗ್ ಲೇನ್‌ಗಳನ್ನಾಗಿ ಪರಿವರ್ತಿಸಲಾಯಿತು. ಪ್ರಸ್ತುತ ಶೇ 97.6ರಷ್ಟು ಶುಲ್ಕ ಸಂಗ್ರಹವು ಫಾಸ್ಟ್ ಟ್ಯಾಗ್ ಮೂಲಕ ನಡೆಯುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ದೊಡ್ಡ ವಾಣಿಜ್ಯ ವಾಹನಗಳಿಂದ ಬಳಕೆದಾರರ ಶುಲ್ಕ ಸಂಗ್ರಹ ಭಾರಿ ಹೆಚ್ಚಳ ಆಗಿದೆ ಎಂದರು.
ಐದು ವರ್ಷಗಳಲ್ಲಿ ₹41,282 ಕೋಟಿ: ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ದೇಶದಲ್ಲಿ 2014ರಲ್ಲಿ 91,287 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ಈಗ 1,46,145 ಕಿ.ಮೀ. ಹೆದ್ದಾರಿ ಇದೆ. ಕರ್ನಾಟಕದಲ್ಲಿ 2014ರಲ್ಲಿ 6,177 ಕಿ.ಮೀ ಹೆದ್ದಾರಿ ಇದ್ದರೆ, ಈಗ 8,191 ಕಿ.ಮೀ ಆಗಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ₹41,282 ಕೋಟಿ ಮೊತ್ತದ 2,628 ಕಿ.ಮೀ. ಉದ್ದದ ಹೆದ್ದಾರಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 94 ಹೆದ್ದಾರಿ ಯೋಜನೆಗಳು ಪ್ರಗತಿಯಲ್ಲಿವೆ. ಈ ಯೋಜನೆಗಳ ಒಟ್ಟು ಉದ್ದ 3,080 ಕಿ.ಮೀ. ಆಗಿದ್ದು, ಯೋಜನಾ ಮೊತ್ತ ₹63,628 ಕೋಟಿ ಎಂದು ಅವರು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.