ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿ ಪ್ರದೇಶದಲ್ಲಿ ಉಂಟಾಗಿರುವ ಭೂಕುಸಿತದಲ್ಲಿ ಕಣ್ಮರೆಯಾಗಿದ್ದವರ ಪೈಕಿ ಮೂವರ ಮೃತದೇಹಗಳನ್ನು ಮಂಗಳವಾರ ಪತ್ತೆಹಚ್ಚಲಾಗಿದ್ದು, ಇದರಿಂದ ಸಾವಿಗೀಡಾದವರ ಸಂಖ್ಯೆ 52ಕ್ಕೆ ಏರಿದೆ.
‘ಕಣ್ಮರೆಯಾದವರ ಪತ್ತೆಗಾಗಿ ಮಂಗಳವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯ ಮೃತದೇಹವನ್ನು ಪತ್ತೆಹಚ್ಚಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಜತೆಗೆ, ಅಗ್ನಿಶಾಮಕ ದಳ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳೂ ಕಾರ್ಯಾಚರಣೆ ಕೈಗೊಂಡಿವೆ. ಆ. 7ರಂದು ರಾಜಮಾಲಾ ಬಳಿ ಸಂಭವಿಸಿದ ದುರಂತದಲ್ಲಿ ನಾಪತ್ತೆಯಾದ 19 ಮಂದಿಯ ಪತ್ತೆಗಾಗಿ ನದಿಯ ಕೆಳ ಪ್ರದೇಶದಲ್ಲೂ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.
ಇಡುಕ್ಕಿ ಜಿಲ್ಲೆಯ ಮುಲ್ಲಾಪೆರಿಯಾರ್ ಜಲಾಶಯದ ಮಟ್ಟ ಮಂಗಳವಾರ 136.85 ಅಡಿ ತಲುಪಿದೆ.
ಮಳೆ ಪ್ರಮಾಣ ಕಡಿಮೆಯಾದ್ದರಿಂದ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಯ ತಗ್ಗು ಪ್ರದೇಶದಲ್ಲಿ ನೆರೆ ಹಾವಳಿ ಕಮ್ಮಿಯಾಗಿದೆ. ಮಳೆಯ ತೀವ್ರತೆ ಕಡಿಮೆಯಾಗಿದ್ದರಿಂದ ಹಾಗೂ ಮಳೆಪೀಡಿತ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ 14 ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ರೆಡ್ ಅಲರ್ಟ್ ಹಿಂತೆಗೆದುಕೊಳ್ಳಲಾಗಿದೆ.
ಚರ್ಚ್ ಕುಸಿತ: ಆಲಪ್ಪುಳ ಜಿಲ್ಲೆಯ ಪಲ್ಲಥುರುತಿಯಲ್ಲಿ ಮಳೆಗೆ 151 ವರ್ಷಗಳಷ್ಟು ಹಳೆಯದಾದ ಸಿಎಸ್‌ಐ ಚರ್ಚ್ ಕುಸಿದಿದೆ. ಈ ಚರ್ಚ್ ಅನ್ನು 1869ರಲ್ಲಿ ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.