ADVERTISEMENT

ಕೇರಳಕ್ಕೆ ಪರಿಹಾರ ನೀಡಲು ಕೇಂದ್ರಕ್ಕೆ ಕೈ ಬಾರದೇಕೆ? 

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2018, 15:50 IST
Last Updated 19 ಆಗಸ್ಟ್ 2018, 15:50 IST
   

ನವದೆಹಲಿ: ಕೇರಳದ ನಿವಾಸಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಜತೆಗೂಡಿ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕೇರಳಕ್ಕೆ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಅಶ್ಚರ್ಯವಾಗಿದೆ.

ದೇವರ ನಾಡು ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ಸಂಪನ್ಮೂಲಗಳ ಕೊರತೆಯ ನಡುವೆಯೂ ಪರಿಹಾರ ಕಾರ್ಯದಲ್ಲಿ ತೊಡಗಿದೆ.

ಕೇಂದ್ರ ಸರ್ಕಾರ ಪರಿಹಾರ ಕಾರ್ಯಗಳಿಗೆ 52 ರಕ್ಷಣಾ ತಂಡಗಳನ್ನು ಕಳುಹಿಸಿಕೊಟ್ಟಿದೆ. ಇದರಲ್ಲಿ ಸೇನೆ ಮತ್ತು ನೌಕಾಪಡೆ ಬೆಟಾಲಿಯನ್‌ಗಳು ಸೇರಿವೆ. 339 ಯಂತ್ರಚಾಲಿತ ದೋಣಿಗಳು, 2800 ಜೀವರಕ್ಷಕ ಜಾಕೇಟ್‌ಗಳು, 1400 ದೋಣಿಗಳು, 27 ದೀಪದ ಟವರ್‌ ಮತ್ತು 1000 ರೈನ್‌ಕೋಟ್‌ಗಳನ್ನು ರವಾನಿಸಿದೆ.

ADVERTISEMENT

ಮಧ್ಯಂತರ ಅಥವಾ ತಕ್ಷಣದ ಪರಿಹಾರಕ್ಕೆ ಕೇರಳ ಸರ್ಕಾರ ₹1,220 ಕೋಟಿ ರೂಪಾಯಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ ₹ 100 ಕೋಟಿ ಬಿಡುಗಡೆ ಮಾಡಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಕೇರಳದಲ್ಲಿ ಮುಂಗಾರು ಅವಾಂತರಕ್ಕೆ ₹10 ಸಾವಿರ ಕೋಟಿ ನಷ್ಟವಾಗಿದೆ.

ಏತನ್ಮಧ್ಯೆ ಕೇರಳ ಬೇಡಿಕೆ ಇಟ್ಟಿದ್ದ ಹಣದಲ್ಲಿ ಶೇ 10ರಷ್ಟನ್ನು ಕೇಂದ್ರ ಸರ್ಕಾರ ನೀಡಿಲ್ಲ. ಆದರೆ ಬರ ಮತ್ತು ಪ್ರವಾಹ ಪೀಡಿತ ಇತರೆ ರಾಜ್ಯಗಳಿಗೆ ಕೇಂದ್ರ ಉತ್ತಮ ಪರಿಹಾರ ನೀಡಿದೆ. ಬಿಜೆಪಿ ಆಡಳಿತ ಇರುವ ಗುಜರಾತ್, ಬಿಹಾರ ಮತ್ತು ಅಸ್ಸಾಂ ರಾಜ್ಯಗಳು ಹೆಚ್ಚಿನ ಅನುದಾನ ಪಡೆದಿವೆ.

ಗುಜರಾತ್‌: ಕಳೆದ ವರ್ಷ ಗುಜರಾತ್‌ನ ವಿವಿಧ ಭಾಗಗಳಲ್ಲಿ ಉಂಟಾಗಿದ್ದ ಜಲ ಪ್ರವಾಹಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ ₹500 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.

ಅಸ್ಸಾಂ: ಜೂನ್‌ 13 ರಿಂದ ಆಗಸ್ಟ್‌ 3ರ ವರೆಗೂ ಅಸ್ಸಾಂ ರಾಜ್ಯದಲ್ಲಿ ಉಂಟಾಗಿದ್ದ ಮಳೆ ಅವಾಂತರಕ್ಕೆ 41 ಜನರು ಮೃತಪಟ್ಟಿದ್ದರು. 7 ಜಿಲ್ಲೆಗಳಲ್ಲಿ 11 ಲಕ್ಷ ಜನರಿಗೆ ತೊಂದರೆಯಾಗಿತ್ತು. ಕೇಂದ್ರ ಸರ್ಕಾರ ತಕ್ಷಣಕ್ಕೆ 340 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನೀಡಿತ್ತು.

ಬಿಹಾರ: ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಜಲ ಪ್ರಳಯಕ್ಕೆ ಬಿಹಾರದಲ್ಲಿ 514 ಜನರು ಮೃತಪಟ್ಟಿದ್ದರು. ಸಮಾರು 1.17 ಕೋಟಿ ಜನರು ತೊಂದರೆಗೀಡಾಗಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 500 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.