ನವದೆಹಲಿ: ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನವಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಪರಿಸರ ಕಾರ್ಯಕರ್ತೆ, 21 ವರ್ಷದ ದಿಶಾ ರವಿ ಅವರನ್ನು ದೆಹಲಿಯ ಸೈಬರ್ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ. ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಜೊತೆ ದಿಶಾ ರವಿ ಅವರು ಟೂಲ್‌ಕಿಟ್ ಅನ್ನು ಹಂಚಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ದಿಶಾ ರವಿ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರವಾದಿಗಳು, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘದ ಕಾರ್ಯದರ್ಶಿ ಕವಿತಾ ಕೃಷ್ಣನ್, 'ದಿಶಾ ರವಿಯಂತಹ ಯುವತಿಯರು ಭಾರತದ ಭರವಸೆಯಾಗಿದ್ದಾರೆ. ಕಾರಣ, ಅವರು ತಮ್ಮ ಬಗ್ಗೆ ಮಾತ್ರವಲ್ಲ, ಭವಿಷ್ಯದ ಪೀಳಿಗೆಗಳ ಬಗ್ಗೆಯೂ ಕಾಳಜಿ ಹೊಂದಿದ್ದಾರೆ' ಎಂದು ತಿಳಿಸಿದ್ದಾರೆ.
'ನಾವೀಗ ಪ್ರಜಾಪ್ರಭುತ್ವದ ತತ್ವಗಳಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಭಟನೆಗಳನ್ನು ಪಿತೂರಿಗಳೆಂದು ಬಿಂಬಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ನಡೆಯಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೂಲ್‌ಕಿಟ್ ಎಂಬುದು ಪಿತೂರಿಯೂ ಅಲ್ಲ. ದೇಶದ್ರೋಹವೂ ಅಲ್ಲ. ಅದೊಂದು ಪ್ರತಿಭಟನೆಗೆ ಮಾಡಿಕೊಳ್ಳುವ ಸಿದ್ಧತೆಯ ಕರಡು. ಆದ್ದರಿಂದ, ದಿಶಾ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕವಿತಾ ಕೃಷ್ಣನ್ ಒತ್ತಾಯಿಸಿದ್ದಾರೆ.
ದಿಶಾ ಬಂಧನವನ್ನು ಖಂಡಿಸಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ಶಬನಮ್ ಹಶ್ಮಿ, 'ಸ್ಥಳೀಯ ಅಭಿಯಾನವನ್ನು ಮಾಡುವವರು ಸಹ ಟೂಲ್‌ಕಿಟ್ ಸಿದ್ಧಪಡಿಸುತ್ತಾರೆ. ನಾವು ಪ್ರಧಾನ ಮಂತ್ರಿಯವರ ಪ್ರಚಾರದ ಟೂಲ್‌ಕಿಟ್ ಅನ್ನು ನೋಡಬೇಕು. ನಾವೀಗ ಅಸಂಬದ್ಧತೆಯ ಮಿತಿಗಳನ್ನು ದಾಟುತ್ತಿದ್ದೇವೆ. ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದೇವೆ' ಎಂದು ಹೇಳಿದ್ದಾರೆ.
ದೆಹಲಿ ಮೂಲದ ವಿಜ್ಞಾನ ಮತ್ತು ಪರಿಸರ ಕೇಂದ್ರದ ಮುಖ್ಯಸ್ಥೆ ಸುನೀತಾ ನರೇನ್ ಅವರು ದಿಶಾ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.
'ಹವಾಮಾನ ಬದಲಾವಣೆ ಎಂಬುದು ಪ್ರಸ್ತುತ ಕಾಲಘಟ್ಟದ ಬೆದರಿಕೆ ಎಂದು ನಮಗೆ ತಿಳಿದಿದೆ. ಉತ್ಸಾಹ ಮತ್ತು ಬದ್ಧತೆ ಇರುವ ದಿಶಾ ರವಿಯಂತಹ ಯುವತಿಯರು ಈ ಪ್ರಪಂಚಕ್ಕೆ ಅವಶ್ಯವಾಗಿದ್ದಾರೆ. ಅವರನ್ನು ಈ ತಕ್ಷಣ ಬಿಡುಗಡೆಗೊಳಿಸಿ' ಎಂದು ಸುನೀತಾ ಟ್ವೀಟ್ ಮಾಡಿದ್ದಾರೆ.
'ದೇಶದ ಯುವತಿಯರು ಮತ್ತು ಮಹಿಳೆಯರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿ ದಿಶಾ ರವಿ ಬಂಧನ ನಡೆದಿದೆ' ಎಂದು ಒಂಬತ್ತು ವರ್ಷದ ಹವಾಮಾನ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿಶಾ ರವಿ ಬಂಧನ ಪ್ರಕರಣವು ಹವಾಮಾನ ಕಾರ್ಯಕರ್ತರನ್ನು ನೈತಿಕವಾಗಿ ಕುಗ್ಗಿಸಲಿದೆ ಎಂದು ಪರಿಸರವಾದಿ ವಿಕ್ರಾಂತ್ ತೊಂಗಡ್ ಹೇಳಿದ್ದಾರೆ.
50ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರು ದಿಶಾ ರವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಬಂಧನವು 'ಕಾನೂನುಬಾಹಿರ' ಎಂದು ಕರೆದಿದ್ದಾರೆ.
ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರು ಟ್ವೀಟ್‌ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ‘ಟೂಲ್‌ಕಿಟ್’ ಅನ್ನು ಹಂಚಿಕೊಂಡಿದ್ದರು. ಇದರ ಸೃಷ್ಟಿಕರ್ತರಿಗೆ ಸಂಬಂಧಿಸಿದ ಇಮೇಲ್ ಐಡಿ, ಯುಆರ್‌ಎಲ್‌ಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮಗಳ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಈ ಹಿಂದೆ ಕೇಳಿದ್ದರು.
ಅಲ್ಲದೆ, ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಸಾರಲಾಗಿದೆ ಎಂದು ಆರೋಪಿಸಿ ದೆಹಲಿ ಸೈಬರ್ ಪೊಲೀಸರು ಖಲಿಸ್ತಾನ ಪರ ಹೋರಾಟಗಾರರು ಮತ್ತು ಟೂಲ್‌ಕಿಟ್ ಸೃಷ್ಟಿಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.