ಮುಂಬೈ: ಟೂಲ್‌ಕಿಟ್ ಪ್ರಕರಣದ ಆರೋಪಿ, ಮುಂಬೈನ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಮೂರು ವಾರಗಳ ತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದೆ. ನಿಕಿತಾ ವಿರುದ್ಧ ದೆಹಲಿ ಪೊಲೀಸರು ಜಾಮೀನುರಹಿತ ವಾರಂಟ್ ಪಡೆದುಕೊಂಡಿದ್ದಾರೆ.
ಬಂಧನದಿಂದ ರಕ್ಷಣೆ ಪಡೆಯಲು ದೆಹಲಿಯ ನ್ಯಾಯಾಲಯಕ್ಕೆ ಹೋಗುವುದಕ್ಕಾಗಿ ಜಾಮೀನು ಮಂಜೂರು ಮಾಡಲಾಗಿದೆ. ಇನ್ನೊಬ್ಬ ಆರೋಪಿ ಶಾಂತನು ಮುಲುಕ್ ಅವರಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಮಂಗಳವಾರವೇ ಜಾಮೀನು ನೀಡಿದೆ.
ಈ ಪ್ರಕರಣದ ಮತ್ತೊಬ್ಬ ಆರೋಪಿ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘ಯಾವುದೇ ಸಂದರ್ಭದಲ್ಲಿ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂಬ ಆತಂಕ ಅರ್ಜಿದಾರರಲ್ಲಿ (ನಿಕಿತಾ) ಇದೆ. ಬೇರೊಂದು ರಾಜ್ಯದ ನ್ಯಾಯಾಲಯದಿಂದ ಅವರು ಜಾಮೀನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಅರ್ಜಿದಾರರ ಕೋರಿಕೆಯಂತೆ ತಾತ್ಕಾಲಿಕವಾಗಿ ಜಾಮೀನು ನೀಡಬಹುದು’ ಎಂದು ನ್ಯಾಯಮೂರ್ತಿ ಪಿ.ಡಿ. ನಾಯ್ಕ್ ಹೇಳಿದರು.
₹25 ಸಾವಿರದ ವೈಯಕ್ತಿಕ ಭದ್ರತೆ ಮತ್ತು ಖಾತರಿಗಳನ್ನು ಒದಗಿಸುವಂತೆ ಕೋರ್ಟ್ ಸೂಚಿಸಿದೆ.
ಹಾರ್ಡ್‌ಡಿಸ್ಕ್ ಒಯ್ದವರ ವಿರುದ್ಧ ದೂರು
ದೆಹಲಿಯ ಪೊಲೀಸರು ಎಂದು ಹೇಳಿಕೊಂಡ ಇಬ್ಬರು ತಮ್ಮ ಮನೆಗೆ ಬಂದು ಕಂಪ್ಯೂಟರ್‌ನ ಹಾರ್ಡ್‌ಡಿಸ್ಕ್ ಮತ್ತು ಇತರ ಕೆಲವು ವಸ್ತುಗಳನ್ನು ಒಯ್ದಿದ್ದಾರೆ ಎಂದು ಶಾಂತನು ಮುಲುಕ್ ಅವರ ತಂದೆ ಶಿವಲಾಲ್ ಮುಲುಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ಶಿವಲಾಲ್ ಅವರು ಮಂಗಳವಾರವೇ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾ ರಾಮಸ್ವಾಮಿ ತಿಳಿಸಿದ್ದಾರೆ.
ಫೆ. 12ರಂದು ಮನೆಗೆ ಬಂದ ಇಬ್ಬರು ಮನೆಯ ಎಲ್ಲ ಕೊಠಡಿಗಳಲ್ಲಿ ಶೋಧ ನಡೆಸಿದ್ದಾರೆ. ಶಾಂತನು ಅವರು ಕೊಠಡಿಯಿಂದ ಕಂಪ್ಯೂಟರ್ ಹಾರ್ಡ್‌ಡಿಸ್ಕ್, ಪರಿಸರಕ್ಕೆ ಸಂಬಂಧಿಸಿದ ಒಂದು ಪೋಸ್ಟರ್, ಒಂದು ಪುಸ್ತಕ ಮತ್ತು ಮೊಬೈಲ್‌ನ ಕವರ್ ಒಂದನ್ನು ಒಯ್ದಿದ್ದಾರೆ. ಈ ಇಬ್ಬರು ಶೋಧದ ವಾರಂಟ್ ಅನ್ನು ತೋರಿಸಿಲ್ಲ ಮತ್ತು ವಸ್ತುಗಳನ್ನು ಒಯ್ಯಲು ಮನೆಯವರ ಅನುಮತಿಯನ್ನು ಕೇಳಿಲ್ಲ ಎಂದು ಶಿವಲಾಲ್ ತಿಳಿಸಿದ್ದಾರೆ.
ವಶಕ್ಕೆ ಪಡೆದ ವಸ್ತುಗಳ ಪಂಚನಾಮೆಯನ್ನೂ ಮಾಡಿಲ್ಲ. ಮನೆ ಶೋಧಕ್ಕೆ ಬಂದವರ ಜತೆಗೆ ಸ್ಥಳೀಯ ಪೊಲೀಸರು ಇರಲಿಲ್ಲ. ಬೀಡ್‌ನ ಸರ್ಕಾರಿ ಅತಿಥಿಗೃಹಕ್ಕೆ ತನಿಖೆಗಾಗಿ ಬರುವಂತೆ ತಮಗೆ ಈ ಇಬ್ಬರು ಸೂಚಿಸಿದ್ದರು ಎಂದೂ ಶಿವಲಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.