ನವದೆಹಲಿ: ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದ್ದು, ಮಂಗಳವಾರ ರಾತ್ರಿಯೇ ಅವರು ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
‘22 ವರ್ಷ ವಯಸ್ಸಿನ ಆರೋಪಿಯ ವಿರುದ್ಧ ಅತ್ಯಲ್ಪ ಮತ್ತು ಹುರುಳಿಲ್ಲದ ಸಾಕ್ಷ್ಯಗಳಷ್ಟೇ ಇವೆ. ಸಮಾಜದಲ್ಲಿ ಬಲವಾದ ಬೇರುಗಳನ್ನು ಹೊಂದಿರುವ ಅವರಿಗೆ ಅಪರಾಧ ಹಿನ್ನೆಲೆ ಇಲ್ಲವೇ ಇಲ್ಲ’ ಎಂದು ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶ ಧರ್ಮೇಂದ್ರ ರಾಣಾ ಹೇಳಿದ್ದಾರೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ರಾಣಾ ಅವರು ಶನಿವಾರ ಆದೇಶವನ್ನು ಕಾಯ್ದಿರಿಸಿದ್ದರು. ರೈತರ ಪ್ರತಿಭಟನೆಗೆ ಬೆಂಬಲ ಕ್ರೋಡೀಕರಿಸಲು ರೂಪಿಸಲಾಗಿದ್ದ ಟೂಲ್‌ಕಿಟ್ ಅನ್ನು ಪರಿಶೀಲಿಸಿದರೆ, ಹಿಂಸೆಗೆ ಕಾರಣವಾಗುವ ಯಾವ ಅಂಶವೂ ಅದರಲ್ಲಿ ಇಲ್ಲ ಎಂದು ಹೇಳಿದ್ದರು.
ದಿಶಾ ಅವರು ಟೂಲ್‌ಕಿಟ್ ಮೂಲಕ ಜನರು ದೇಶದ ಬಗ್ಗೆ ಅಸಮಾಧಾನಗೊಳ್ಳುವಂತೆ ಮಾಡಿದ್ದರು ಎಂದು ದೆಹಲಿ ಪೊಲೀಸರು ಮಾಡಿದ ಆರೋಪವನ್ನೇ ನ್ಯಾಯಾಲಯವು ತನ್ನ 18 ಪುಟಗಳ ಆದೇಶದಲ್ಲಿ ತರಾಟೆಗೆ ತೆಗೆದುಕೊಂಡಿದೆ.
‘ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಯಾವುದೇ ದೇಶದಲ್ಲಿ ಪ್ರಜೆಗಳು ಸರ್ಕಾರದ ಆತ್ಮಸಾಕ್ಷಿ ಸಂರಕ್ಷಕರಂತೆ ಕೆಲಸ ಮಾಡುತ್ತಾರೆ. ಸರ್ಕಾರದ ನೀತಿಗಳನ್ನು ಒಪ್ಪಿಲ್ಲ ಎಂಬ ಒಂದೇ ಕಾರಣಕ್ಕೆ ಜನರನ್ನು ಜೈಲಿಗೆ ತಳ್ಳಲಾಗದು ಎಂಬುದು ನನ್ನ ಅಭಿಪ್ರಾಯ’ ಎಂದು ನ್ಯಾಯಾಧೀಶರು ಹೇಳಿದರು.
ಐದು ಸಾವಿರ ವರ್ಷಗಳ ನಮ್ಮ ನಾಗರಿಕತೆಯು ವಿವಿಧ ರೀತಿಯ ಚಿಂತನೆಗಳ ಬಗ್ಗೆ ಯಾವತ್ತೂ ಅಸಡ್ಡೆ ಹೊಂದಿರಲಿಲ್ಲ ಎಂದು ಋಗ್ವೇದವನ್ನು ಉಲ್ಲೇಖಿಸಿ ರಾಣಾ ಅವರು ಹೇಳಿದ್ದಾರೆ.
ಭಿನ್ನಮತ, ವೈವಿಧ್ಯ, ಅಸಮಾಧಾನ ಮತ್ತು ಅಸಮ್ಮತಿಗಳೆಲ್ಲವೂ ಸರ್ಕಾರದ ನೀತಿಯಲ್ಲಿ ವಸ್ತುನಿಷ್ಠತೆ ಮೂಡಿಸುವ ನ್ಯಾಯಬದ್ಧ ಸಾಧನಗಳು ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಸರ್ಕಾರದ ಒಣಜಂಭವನ್ನು ತೃಪ್ತಿಪಡಿಸುವುದಕ್ಕಾಗಿ ದೇಶದ್ರೋಹ ಕಾಯ್ದೆಯನ್ನು ಬಳಸಿಕೊಳ್ಳಲಾಗದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಜಾಮೀನಿಗೆ ಅರ್ಜಿ ಸಲ್ಲಿಸಿದ ಶಾಂತನು
ಟೂಲ್‌ಕಿಟ್ ಪ್ರಕರಣದ ಆರೋಪಿ ಶಾಂತನು ಮುಲುಕ್ ಅವರು ದೆಹಲಿಯ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ನ್ಯಾಯಾಧೀಶ ರಾಣಾ ಅವರ ಮುಂದೆ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಮುಂಬೈ ಹೈಕೋರ್ಟ್ ಶಾಂತನು ಅವರಿಗೆ ಇದೇ 16ರಂದು 10 ದಿನಗಳ ಜಾಮೀನು ನೀಡಿತ್ತು. ದೆಹಲಿಯ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕಾಗಿ ಈ ತಾತ್ಕಾಲಿಕ ಜಾಮೀನು ನೀಡಲಾಗಿತ್ತು. ಟೂಲ್‌ಕಿಟ್ ಪ್ರಕರಣದಲ್ಲಿ ಶಾಂತನು ಮತ್ತು ಮುಂಬೈನ ವಕೀಲೆ ನಿಕಿತಾ ಜೇಕಬ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.