ADVERTISEMENT

ತೂತ್ತುಕುಡಿ ತಾಮ್ರ ಘಟಕಕ್ಕೆ ಮತ್ತೆ ಕಾನೂನು ಕಂಟಕ

ವೇದಾಂತ ಕಂಪನಿಗೆ ಹಿನ್ನಡೆ: ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧಾರ

ಪಿಟಿಐ
Published 22 ಡಿಸೆಂಬರ್ 2018, 20:10 IST
Last Updated 22 ಡಿಸೆಂಬರ್ 2018, 20:10 IST
ತೂತ್ತುಕುಡಿ ತಾಮ್ರ ಘಟಕ
ತೂತ್ತುಕುಡಿ ತಾಮ್ರ ಘಟಕ   

ಚೆನ್ನೈ: ಹಲವು ತಿಂಗಳಿಂದ ಕಾರ್ಯಸ್ಥಗಿತ ತೂತ್ತುಕುಡಿಯಲ್ಲಿರುವ ವೇದಾಂತ್‌ ಕಂಪನಿಯ ತಾಮ್ರ ಸಂಸ್ಕರಣಾ ಘಟಕ ಪುನರ್‌ ಆರಂಭಕ್ಕೆ ಮತ್ತೊಂದು ಕಾನೂನು ಕಂಟಕ ಎದುರಾಗಿದೆ.

ಯಥಾಸ್ಥಿತಿ ಕಾಪಾಡುವಂತೆ ಶನಿವಾರ ಆದೇಶ ಹೊರಡಿಸಿರುವ ಮದ್ರಾಸ್‌ ಹೈಕೋರ್ಟ್, ಮುಂದಿನ ಆದೇಶದವರೆಗೂ ತೂತ್ತುಕುಡಿಯ ತಾಮ್ರ ಘಟಕದ ಬಾಗಿಲು ತೆರೆಯದಂತೆ ತಾಕೀತು ಮಾಡಿದೆ. ಇದರಿಂದಾಗಿ ವೇದಾಂತ ಕಂಪನಿಗೆ ತೀವ್ರ ಹಿನ್ನಡೆಯಾಗಿದೆ.

ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಹಲವು ತಿಂಗಳಿಂದ ಕಾರ್ಯ ಸ್ಥಗಿತಗೊಳಿಸಿದ್ದ ತೂತ್ತುಕುಡಿ ತಾಮ್ರ ಘಟಕ ಪುನರ್‌ ಆರಂಭಿಸಲು ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಡಿಸೆಂಬರ್‌ 15ರಂದು ಒಪ್ಪಿಗೆ ನೀಡಿತ್ತು.

ADVERTISEMENT

ಜನವರಿ 21ರವರೆಗೂ ಎನ್‌ಜಿಟಿ ಆದೇಶಕ್ಕಿಂತ ಮೊದಲಿದ್ದ ಸ್ಥಿತಿಯನ್ನು ಕಾಪಾಡುವಂತೆ ಮದ್ರಾಸ್‌ ಹೈಕೋರ್ಟ್‌ನ ಮದುರೆ ವಿಭಾಗೀಯ ಪೀಠ ಆದೇಶಿಸಿದೆ.

ಎನ್‌ಜಿಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಇರಾದೆ ಏನಾದರೂ ಇದ್ದರೆ ತಿಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

‘ಸುಪ್ರೀಂ’ ಮೊರೆ: ಮದ್ರಾಸ್‌ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ವೇದಾಂತ ಕಂಪನಿ ತಿಳಿಸಿದೆ.ರಾಷ್ಟ್ರೀಯ ಹಸಿರು ಪೀಠದ ಆದೇಶ ಜಾರಿಗೆ ಒಪ್ಪಿಗೆ ನೀಡುವಂತೆ ಮನವಿ ಸಲ್ಲಿಸುವುದಾಗಿ ಕಂಪನಿಯ ಸಿಇಒ ಪಿ. ರಾಮನಾಥ್ ತಿಳಿಸಿದ್ದಾರೆ.

ಜನವರಿ ಒಳಗಾಗಿ ತಾಮ್ರ ಘಟಕ ಪುನರ್‌ ಆರಂಭಿಸಲು ಎನ್‌ಜಿಟಿ ಡಿಸೆಂಬರ್‌ 15ರಂದು ಆದೇಶ ಹೊರಡಿಸಿತ್ತು.

ಕಾರ್ಖಾನೆ ಆರಂಭಿಸಲು ಪರವಾನಗಿ ನವೀಕರಿಸಲು ತಮಿಳುನಾಡು ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ತಾಕೀತು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.