ವಿಮಾನ ಮಾರಾಟದಲ್ಲಿ ಸರ್ಕಾರಕ್ಕೆ ಮೋಸ, ದೆಹಲಿಯಲ್ಲಿ ಯುವತಿಯ ಭೀಕರ ಹತ್ಯೆ, ತಿ.ನರಸೀಪುರ ಬಳಿ ಕಾರು –ಖಾಸಗಿ ಬಸ್ ಅಪಘಾತ, ಕುಸ್ತಿಪಟುಗಳಿಗೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ಹಾಕ್ ಏರ್‌ಕ್ರಾಫ್ಟ್ ಮಾರಾಟ ಸಂಬಂಧ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಪ್ರಖ್ಯಾತ ದುಬಾರಿ ಕಾರು ತಯಾರಕ ಕಂಪನಿ ‘ರೋಲ್ಸ್ ರಾಯ್ಸ್ ಇಂಡಿಯಾ‘ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಜಂತರ್‌ಮಂತರ್‌ನಲ್ಲಿ ಕುಸ್ತಿಪಟುಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳವನ್ನು ಖಾಲಿ ಮಾಡಿದ ಮರುದಿನವೇ ದೆಹಲಿ ಪೊಲೀಸರಿಂದ ಈ ಹೇಳಿಕೆ ಹೊರಬಿದ್ದಿದೆ.
ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, 10 ಮಂದಿ ಸಾವಿಗೀಡಾಗಿದ್ದಾರೆ. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಮಹತ್ತರವಾದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಸೌಭಾಗ್ಯ. 1962ರಲ್ಲಿ ಕರ್ನಾಟಕ ವಿಧಾನಸಭೆಗೆ ಪ್ರವೇಶಿಸಿ, 1991ರಿಂದ ಸಂಸತ್ ಸದಸ್ಯನಾಗಿದ್ದೆ.
16 ವರ್ಷದ ಯುವತಿಗೆ ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಜಜ್ಜಿ ಕೊಂದ 20 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 20 ವರ್ಷದ ಸಾಹೀಲ್ ಎಂದು ಗುರುತಿಸಲಾಗಿದೆ. ಈತ ಯುವತಿಗೆ 20ಕ್ಕೂ ಅಧಿಕ ಬಾರಿ ಚಾಕುವಿನಿಂದ ಚುಚ್ಚಿ, ಬಳಿಕ, ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
9 ವರ್ಷ ಪೂರ್ಣಗೊಳಿಸಿದ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ. ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಜನರ ಹಣವನ್ನು ಲೂಟಿ ಮಾಡುತ್ತಿದೆ. ಮಾತ್ರವಲ್ಲ ಈ ಬಗ್ಗೆ ಅಹಂಕಾರದಿಂದ ಮಾತನಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ತೆಲುಗು ನಟ ಶರ್ವಾನಂದ್ ಅವರ ಕಾರು ಭಾನುವಾರ ಅಪಘಾತಕ್ಕೀಡಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು. ಸುರಕ್ಷಿತರಾಗಿದ್ದೇನೆ ಎಂದು ನಟ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟ ಶರ್ವಾನಂದ್ ‘ ಭಾನುವಾರ ಬೆಳಿಗ್ಗೆ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹೆಚ್ಚು ಹರಿದಾಡಿದೆ. ಆದರೆ ಇದು ತುಂಬಾ ಚಿಕ್ಕ ಅಪಘಾತ. ಚಿಂತಿಸುವ ಅಗತ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಮೇ 31ರ ಬಳಿಕ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, 9 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ–ಗ್ರಾಮಾಂತರ, ರಾಮನಗರ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಮೇ 31ರಂದು ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ನ್ಯಾವಿಗೇಷನ್ (ಪಥದರ್ಶಕ) ಉಪಗ್ರಹ ‘ಎನ್‌ವಿಎಸ್–01’ ಅನ್ನು ಹೊತ್ತ ಜಿಎಸ್‌ಎಲ್‌ವಿ ರಾಕೆಟ್ ಸೋಮವಾರ ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿತು.
ಉಡಾವಣೆಗೊಂಡ ಸುಮಾರು 19 ನಿಮಿಷಗಳಲ್ಲಿ 251 ಕಿಮೀ ಎತ್ತರದ ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹ ಯಶಸ್ವಿಯಾಗಿ ಸೇರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಚೆನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆಯಬೇಕಿದ್ದ ಐಪಿಎಲ್ ಫೈನಲ್ ಮ್ಯಾಚ್ ಮಳೆಯಿಂದ ನಿಂತು ಹೋಗಿದೆ. ನೆಚ್ಚಿನ ನಾಯಕ ಮಹೇಂದ್ರ ಸಿಂಗ್ ಧೋನಿಯ ರೋಚಕ ಆಟ ನೋಡಲು ಕಾತುರರಾಗಿದ್ದ ಅಭಿಮಾನಿಗಳಿಗೆ ಮಳೆ ನಿರಾಸೆಯುಂಟು ಮಾಡಿದೆ. ಈ ನಡುವೆ ಕೆಲವು ಅಭಿಮಾನಿಗಳು ಮಳೆ ಬರಲು ಕಾರಣ ‘ಶ್ರದ್ಧಾ ಕಪೂರ್‘ ಎಂದು ಕೀಟಲೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.