ನವದೆಹಲಿ: ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಪುನರ್‌ಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡುವ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸೆಪ್ಟೆಂಬರ್ 28ರಂದು ನೀಡಿತ್ತು.
‘ಮರುಪರಿಶೀಲನೆ ಕೋರಿರುವ ಎಲ್ಲ ಅರ್ಜಿಗಳನ್ನು 2019ರ ಜನವರಿ 22ರಂದು ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠ ಹೇಳಿತು. ಆದರೆ, ಸೆ. 28ರ ತೀರ್ಪಿಗೆ ತಡೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಕೋರಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠವು 4:1 ಬಹುಮತದಲ್ಲಿ ತೀರ್ಪು ನೀಡಿತ್ತು. ಲಿಂಗ ಮತ್ತು ಋತುಸ್ರಾವದಂತಹ ದೈಹಿಕ ಲಕ್ಷಣಗಳ ಆಧಾರದಲ್ಲಿ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿತ್ತು.
ಆದರೆ, ಈ ತೀರ್ಪಿಗೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಕ್ತರು ಮತ್ತು ಇತರರ ಪ್ರತಿರೋಧದಿಂದಾಗಿ ಈವರೆಗೆ ಯಾವುದೇ ಮಹಿಳೆ ಶಬರಿಮಲೆ ದೇಗುಲ ಪ್ರವೇಶಿಸುವುದು ಸಾಧ್ಯವಾಗಿಲ್ಲ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಪುನರ್‌ವಿಮರ್ಶೆ ಅರ್ಜಿಗಳನ್ನು ನ್ಯಾಯಮೂರ್ತಿಗಳು ತಮ್ಮ ಕೊಠಡಿಯಲ್ಲಿ ಪರಿಶೀಲನೆ ನಡೆಸುತ್ತಾರೆ. ಆಗ ವಕೀಲರ ಉಪಸ್ಥಿತಿ ಇರುವುದಿಲ್ಲ. ತೀರ್ಪು ನೀಡಿದ ಅದೇ ಪೀಠವೇ ಪುನರ್‌ವಿಮರ್ಶೆ ಅರ್ಜಿಗಳನ್ನೂ ಪರಿಶೀಲಿಸಬೇಕು.
ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಶಬರಿಮಲೆ ಪ್ರಕರಣದ ತೀರ್ಪು ನೀಡಿತ್ತು. ಈಗ, ಮಿಶ್ರಾ ಅವರು ನಿವೃತ್ತರಾಗಿರುವುದರಿಂದ ಹೊಸ ಪೀಠ ರಚನೆ ಅನಿವಾರ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.