ನವದೆಹಲಿ: ದೇಶವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಗಿದ್ದ ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ತಡೆಹಿಡಿಯಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಅಲ್ಲದೆ ಕಾನೂನಿಗೆ ಸಂಬಂಧಿಸಿದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ನಾಲ್ಕು ವಾರಗಳ ಗಡುವನ್ನು ನೀಡಿದೆ.
ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಪೌರತ್ವ ಕಾನೂನಿನ ಕುರಿತು ಸಲ್ಲಿಕೆಯಾಗಿರುವ ಸುಮಾರು 140 ಅರ್ಜಿಗಳಿಗೆ ಮಧ್ಯಂತರ ಆದೇಶ ನೀಡಲಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಕೇಳದೆಯೇ ಪೌರತ್ವ ಕಾನೂನಿಗೆ ಯಾವುದೇ ತಡೆಯನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈಗ ಸಲ್ಲಿಕೆಯಾಗಿರುವ ಅರ್ಜಿಗಳು ಬಗೆಹರಿಯದ ಹೊರತು ಸಿಎಎ ಮೇಲಿನ ಅರ್ಜಿಗಳ ವಿಚಾರಣೆ ನಡೆಸದಂತೆ ಎಲ್ಲಾ ಹೈಕೋರ್ಟ್‌ಗಳಿಗೂ ಕೋರ್ಟ್ ನಿರ್ಬಂಧ ಹೇರಿದೆ.
ಇದನ್ನೂ ಓದಿ:ಸಿಎಎ ಕಾಯ್ದೆ ಹಿಂಪಡೆಯುವುದಿಲ್ಲ: ಅಮಿತ್ ಶಾ
ಅಸ್ಸಾಂ ಮತ್ತು ತ್ರಿಪುರಗಳಲ್ಲಿ ಸಿಎಎ ಸಮಸ್ಯೆ ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿರುವುದರಿಂದ ಈ ಎರಡು ರಾಜ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗುವುದು ಎಂದು ಮೂವರು ನ್ಯಾಯಾಧೀಶರು ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಇಂದು 143 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಅರ್ಜಿಗಳು ಸಿಎಎ ಮಾನ್ಯತೆ ಕುರಿತು ಪ್ರಶ್ನಿಸಿದ್ದವು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಸಲ್ಲಿಕೆಯಾಗಿದ್ದ 143 ಅರ್ಜಿಗಳಲ್ಲಿ ಸುಮಾರು 60 ಅರ್ಜಿಗಳ ಪ್ರತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಇನ್ನುಳಿದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸಮಯ ಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಿಎಎಯನ್ನು ತಡೆಹಿಡಿಯಬೇಕು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ಸದ್ಯದ ಮಟ್ಟಿಗೆ ಮುಂದೂಡಬೇಕು ಎಂದು ನ್ಯಾಯಪೀಠವನ್ನು ಒತ್ತಾಯಿಸಿದ್ದರು.
ಅರ್ಜಿಗಳ ವಿಚಾರಣೆಯು ಯಾರೊಬ್ಬರಿಗೂ ಪ್ರವೇಶವಿಲ್ಲದ ಕೋಣೆಯಲ್ಲಿ ನಡೆಯಿತು. ಅಲ್ಲಿಗೆ ಇತರೆ ವಕೀಲರು ಪ್ರವೇಶಿಸಲು ಕೂಡ ಅವಕಾಶವಿರಲಿಲ್ಲ.
ಈಗ ಉಂಟಾಗಿರುವ ಅವ್ಯವಸ್ಥೆ ಮತ್ತು ಈ ವಿಚಾರವಾಗಿ ಏನನ್ನಾದರೂ ಮಾಡಲು ನ್ಯಾಯಾಲಯವನ್ನು ಒತ್ತಾಯಿಸಿದ ಅಟಾರ್ನಿ ಜನರಲ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ, 'ಪೌರತ್ವ ಕಾನೂನು ವಿಷಯವು ಅತ್ಯುನ್ನತವಾಗಿದ್ದು, ಎಲ್ಲರ ಮನಸ್ಸಿನಲ್ಲಿಯೂ ಇದೆ' ಎಂದು ಹೇಳಿದರು.
'ಈ ವಿಚಾರಣೆ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ್ದರಿಂದಾಗಿ ಹೀಗೆ ಕೋಣೆಗಳಲ್ಲಿ ವಿಚಾರಿಸಬೇಕಾಯಿತು. ಕೆಲವು ಸಣ್ಣ ವಿಷಯಗಳನ್ನು ನಾವು ಕೋಣೆಗಳಲ್ಲಿ ವಿಚಾರಿಸಬಹುದು ಮತ್ತು ವಕೀಲರು ಕೂಡ ಈ ಕೋಣೆಗಳಿಗೆ ಬರಬಹುದು' ಎಂದು ಅವರು ಹೇಳಿದರು.
ಸದ್ಯ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಆದೇಶಿಸಿದೆ.
ಇನ್ನಷ್ಟು:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.