ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಸಜಾದ್ ಅಫ್ಘಾನಿ ಎಂಬವನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಉಗ್ರರ ಅಟ್ಟಹಾಸವನ್ನು ನಿರಂತರವಾಗಿ ದಮನಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಕಾರ್ಯಾಚರಣೆಯ ವಿವರಣೆ ನೀಡಿರುವ ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್, ಉಗ್ರ ವಿಲಾಯತ್ ಲೋನ್ ಅಲಿಯಾಸ್ ಸಜಾದ್ ಅಫ್ಘಾನಿಯ ಹತ್ಯೆಯನ್ನು ಖಚಿತಪಡಿಸಿದ್ದು, ಭದ್ರತಾ ಪಡೆ ಹಾಗೂ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆತ (ಅಫ್ಘಾನಿ) ದಕ್ಷಿಣ ಕಾಶ್ಮೀರದಲ್ಲಿ, ವಿಶೇಷವಾಗಿ ಶೋಪಿಯಾನ್‌ನಲ್ಲಿ ಉಗ್ರರನ್ನು ನೇಮಕ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಇದು ಭದ್ರತಾ ಪಡೆಗಳಿಗೆ ದೊರಕಿರುವ ದೊಡ್ಡ ಯಶಸ್ಸು. ಈ ಕಾರ್ಯಾಚರಣೆಗಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅಫ್ಘಾನಿ ಹಾಗೂ ಆತನ ಸಹಚರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೇನೆ ಹಾಗೂ ಹಾಗೂ ಭದ್ರತಾ ಪಡೆಗಳು ಶೋಪಿಯನ್ ಜಿಲ್ಲೆಯ ರಾವಲ್‌ಪೋರಾ ಗ್ರಾಮದಲ್ಲಿ ಶುಕ್ರವಾರ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಬಳಿಕ ಗುಂಡಿನ ಚಕಮಕಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ಮೂರು ಮನೆಗಳು ಹಾನಿಗೊಳಗಾಗಿದ್ದು, ಕಲ್ಲು ತೂರಾಟವು ನಡೆದಿತ್ತು.
ಮುನ್ನಚ್ಚೆರಿಕಾ ಕ್ರಮದ ಭಾಗವಾಗಿ ಶೋಪಿಯನ್ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೋಯ್ಬಾ ಉಗ್ರ ಜಹಾಂಗೀರ್ ಅಹ್ಮದ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಆತನಿಂದ ಅಮೆರಿಕ ನಿರ್ಮಿತ ಎಂ4-ರೈಫಲ್ ಮತ್ತು ಮದ್ದು ಗುಂಡುಗಳನ್ನು ವಶಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.