ADVERTISEMENT

7 ವಿಮಾನಗಳಿಗೆ ಬಾಂಬ್‌ ಬೆದರಿಕೆ: ತುರ್ತು ಭೂಸ್ಪರ್ಶ

ಸಂಚಾರ ವಿಳಂಬ l ಭದ್ರತಾ ತಪಾಸಣೆ ತೀವ್ರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 15:14 IST
Last Updated 15 ಅಕ್ಟೋಬರ್ 2024, 15:14 IST
<div class="paragraphs"><p>ವಿಮಾನ</p></div>

ವಿಮಾನ

   

(ಸಾಂದರ್ಭಿಕ ಚಿತರ್)

ನವದೆಹಲಿ: ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಏಳು ವಿಮಾನಗಳಿಗೆ ಮಂಗಳವಾರವೂ ಸಾಮಾಜಿಕ ಮಾಧ್ಯಮಗಳ ಬಾಂಬ್‌ ಬೆದರಿಕೆ ಹಾಕಲಾಯಿತು.

ADVERTISEMENT

ಇವುಗಳಲ್ಲಿ ಎರಡು ಅಂತರರಾಷ್ಟ್ರೀಯ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿವೆ.

ಅಯೋಧ್ಯೆ ಮೂಲಕ ಜೈಪುರದಿಂದ ಬೆಂಗಳೂರಿಗೆ, ದೆಹಲಿಯಿಂದ ಷಿಕಾಗೊಗೆ ಮತ್ತು ಮಧುರೈನಿಂದ ಸಿಂಗಪುರಕ್ಕೆ ತೆರಳುತ್ತಿದ್ದ ಏರ್‌ ಇಂಡಿಯಾದ ಮೂರು ವಿಮಾನಗಳು, ದರ್ಭಂಗಾದಿಂದ ಮುಂಬೈಗೆ ಸಂಚರಿಸಿದ ಸ್ಪೈಸ್‌ ಜೆಟ್‌ ವಿಮಾನ ಹಾಗೂ ಸಿಲಿಗುರಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಸ ವಿಮಾನ, ಸೌದಿ ಅರೇಬಿಯಾದ ದಮಾಮ್‌ನಿಂದ ಲಖನೌಗೆ ಬರುತ್ತಿದ್ದ ಇಂಡಿಗೋ ವಿಮಾನ, ಅಮೃತಸರ–ಡೆಹರಾಡೂನ್‌–ದೆಹಲಿ ಅಲೈಯನ್ಸ್‌ ವಿಮಾನಗಳಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಬೆದರಿಕೆ ಸಂದೇಶಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವನ್ನು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಮಧ್ಯಾಹ್ನ 2:25 ಗಂಟೆಗೆ ಅಯೋಧ್ಯೆಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಈ ವಿಮಾನವು ಸಂಜೆ 5 ಗಂಟೆಗೆ ಸಂಚಾರ ಆರಂಭಿಸಿತು.

ದೆಹಲಿಯಿಂದ ಷಿಕಾಗೊಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಕೆನಡಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿ, ತಪಾಸಣೆ ನಡೆಸಲಾಗಿದೆ. ಸೌದಿ ಅರೇಬಿಯಾದ ದಮಾಮ್‌ನಿಂದ ಲಖನೌಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಜೈಪುರದಲ್ಲಿ ತುರ್ತು ಭೂ ಸ್ಪರ್ಶ ಮಾಡಿಸಲಾಗಿದೆ.

ಮಧುರೈನಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಸಿಂಗಪುರಗೆ ತಲುಪಿದೆ. ಅಮೃತಸರ–ಡೆಹರಾಡೂನ್‌–ದೆಹಲಿ ವಿಮಾನವನ್ನು ಡೆಹರಾಡೂನ್‌ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು.

ಸ್ಪೈಸ್‌ ಜೆಟ್‌ ವಿಮಾನವು ಮುಂಬೈನಲ್ಲಿ ಮತ್ತು ಆಕಾಸ ವಿಮಾನವು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವ ಮೂಲಕ ನಿಗದಿತ ಸ್ಥಳವನ್ನು ತಲುಪಿವೆ. 

‘ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ವಿಮಾನಯಾನ ಭದ್ರತಾ ಸಂಸ್ಥೆ ತಿಳಿಸಿದೆ.

‘ಸೈಬರ್‌ ಭದ್ರತಾ ಏಜೆನ್ಸಿ ಮತ್ತು ಪೊಲೀಸರ ಸಹಾಯದಿಂದ, ಬೆದರಿಕೆ ಸಂದೇಶ ರವಾನಿಸಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ವಿಮಾನಯಾನ ಭದ್ರತಾ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಬಾಂಬ್‌ ಬೆದರಿಕೆ ಪ್ರಕರಣ ಹೆಚ್ಚುತ್ತಿದ್ದು, ಸೋಮವಾರ ಮುಂಬೈನಿಂದ ಹೊರಟಿದ್ದ 3 ಅಂತರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿತ್ತು. ಅದರಲ್ಲಿ ಒಂದು ವಿಮಾನವು ನವದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ವಿಳಂವಾಗಿ ಸಂಚಾರ ಆರಂಭಿಸಿದ್ದವು.

* ‘ಎಕ್ಸ್‌’ ಮೂಲಕ ಬೆದರಿಕೆ ಸಂದೇಶ ರವಾನೆ * ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ * ಎರಡು ದಿನಗಳಲ್ಲಿ 10 ವಿಮಾನಗಳಿಗೆ ಬೆದರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.