ADVERTISEMENT

ಹತ್ತು ತಿಂಗಳಲ್ಲಿ ಗೋವಾಕ್ಕೆ ಒಂದು ಕೋಟಿ ಪ್ರವಾಸಿಗರ ಭೇಟಿ: ಸಚಿವ ರೋಹನ್‌

ಪಿಟಿಐ
Published 16 ಜೂನ್ 2024, 9:59 IST
Last Updated 16 ಜೂನ್ 2024, 9:59 IST
<div class="paragraphs"><p>ಗೋವಾ ಬೀಚ್‌ (ಪ್ರಾತಿನಿಧಿಕ ಚಿತ್ರ)</p></div>

ಗೋವಾ ಬೀಚ್‌ (ಪ್ರಾತಿನಿಧಿಕ ಚಿತ್ರ)

   

ಪಣಜಿ: ಈ ಬಾರಿ ಸೆಪ್ಟೆಂಬರ್‌ನಿಂದ ಜೂನ್‌ವರೆಗೆ ಗೋವಾಕ್ಕೆ ಒಂದು ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್‌ ಖೌಂಟೆ ಹೇಳಿದ್ದಾರೆ.

ಸಾಮಾನ್ಯವಾಗಿ ಸೆಪ್ಟೆಂಬರ್‌ನಿಂದ ಜೂನ್‌ವರೆಗೆ ಪ್ರವಾಸದ ಋತುವಾಗಿದೆ. ಈ ವೇಳೆ ಹೆಚ್ಚು ಮಂದಿ ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಮಳೆಗಾಲದಲ್ಲಿಯೂ ರಾಜ್ಯಕ್ಕೆ ಪ್ರವಾಸಿಗರು ಬರುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ. 

ADVERTISEMENT

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಗೋವಾಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಇದು ಕೋವಿಡ್-19 ಪೂರ್ವಕ್ಕಿಂತ ಶೇ 150ರಷ್ಟು ಹೆಚ್ಚಾಗಿದೆ’ ಎಂದು ಮಾಹಿತಿ ನೀಡಿದರು. 

ಹೊಸ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಗೋವಾ ಇನ್ನೂ ಸುಧಾರಿಸಬೇಕಾಗಿದೆ ಎಂದು ಸಚಿವರು ಹೇಳಿದರು.

ಈ ಸಲ ಮಳೆಗಾಲದ ಋತುವಿನಲ್ಲಿ ಗೋವಾದಲ್ಲಿ ಶೇ 80 ರಷ್ಟು ಹೋಟೆಲ್‌ಗಳು ಬುಕಿಂಗ್‌ ಆಗಿವೆ. ಗೋವಾ ಎಂದರೆ ಬೀಚ್‌ಗಳಷ್ಟೇ ಅಲ್ಲ ಎಂಬುದನ್ನು ಮನಗಂಡ ಜನರು ಮಳೆಗಾಲದಲ್ಲೂ ಗೋವಾಕ್ಕೆ ಬರುತ್ತಾರೆ.

ಜಲಪಾತಗಳು, ಹಚ್ಚ ಹಸಿರಿನ ಹಳ್ಳಿಗಳು, ಕಾಡುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಹಳ್ಳಿಗಳಿಗೆ ಭೇಟಿ ನೀಡುವ ಪ್ರವಾಸಿಗರು ಗೋವಾದ ಕಡಲತೀರಗಳಿಗಿಂತ ಹೆಚ್ಚು ನೆಮ್ಮದಿ ಸಿಗಲಿದೆ ಎನ್ನುತ್ತಾರೆ. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.