ADVERTISEMENT

ಬಿಜೆಪಿ ವಕ್ತಾರರ ಜತೆ ಅನುಚಿತ ವರ್ತನೆ ಆರೋಪ: ಸಂಚಾರ ಪೊಲೀಸ್ ಅಧಿಕಾರಿ ಅಮಾನತು

ಪಿಟಿಐ
Published 23 ಜೂನ್ 2024, 15:48 IST
Last Updated 23 ಜೂನ್ 2024, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ರಾಜ್ಯ ಬಿಜೆಪಿ ಘಟಕದ ವಕ್ತಾರ ರಾಕೇಶ್ ತ್ರಿಪಾಠಿ ಮತ್ತು ಅವರ ಕುಟುಂಬದ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ಸಂಚಾರ ವಿಭಾಗದ ಸಬ್–ಇನ್‌ಸ್ಪೆಕ್ಟರ್ ಒಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 

ಶನಿವಾರ ಸಂಜೆ ತ್ರಿಪಾಠಿ ಅವರ ಕುಟುಂಬಸ್ಥರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಯ ಕಡೆಗೆ ಹೊರಟಿದ್ದರು. ಈ ವೇಳೆ ಕೃಷ್ಣನಗರ ಎಂಬಲ್ಲಿ ಸಂಚಾರ ವಿಭಾಗದ ಸಬ್‌–ಇನ್‌ಸ್ಪೆಕ್ಟರ್ ಆಶುತೋಷ್ ತ್ರಿಪಾಠಿ ಅವರು ಕಾರನ್ನು ತಡೆದು, ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಎಲ್ಲಾ ದಾಖಲೆಗಳನ್ನು ತೋರಿಸಿದ ಹೊರತಾಗಿಯೂ, ಇನ್‌ಸ್ಪೆಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

‘ವಾಹನ ತಡೆದು ಪರಿಶೀಲನೆ ನಡೆಸಿದ ಸಬ್‌–ಇನ್‌ಸ್ಪೆಕ್ಟರ್ ಅವರಿಗೆ ಕಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಿದ್ದೆ. ಆದಾಗ್ಯೂ, ಪೊಲೀಸ್ ಅಧಿಕಾರಿ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ರಾಕೇಶ್ ತ್ರಿಪಾಠಿ ದೂರು ಸಲ್ಲಿಸಿದ್ದಾರೆ.

ADVERTISEMENT

ಪ್ರಾಥಮಿಕ ವಿಚಾರಣೆಯಲ್ಲಿ ಈ ಆರೋಪಗಳು ನಿಜವೆಂದು ಸಾಬೀತಾಗಿವೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ಸಂಚಾರ ಪೊಲೀಸ್ ಘಟಕ ಹೇಳಿಕೆ ಬಿಡುಗಡೆ ಮಾಡಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಚಾರ ಭಾರಿ ಸದ್ದು ಮಾಡಿದೆ. ಈ ಘಟನೆ ಕುರಿತು ರಾಜ್ಯ ಪೊಲೀಸರು ಗಮನಹರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ರಾಧಾ ಮೋಹನ್ ದಾಸ್ ಅಗರ್‌ವಾಲ್ ಒತ್ತಾಯಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.