ನವದೆಹಲಿ (ಪಿಟಿಐ): ಜೈಲಿನಲ್ಲಿರುವ ಸಹ ಕೈದಿಗಳಿಗೆ ಒದಗಿಸಿರುವ ಸಮಾನ ಹಕ್ಕುಗಳು ಮತ್ತು ಸೌಲಭ್ಯವನ್ನು ಲಿಂಗತ್ವ ಅಲ್ಪಸಂಖ್ಯಾತ ಕೈದಿಗಳಿಗೂ ಕಲ್ಪಿಸಬೇಕು. ಯಾವುದೇ, ತಾರತಮ್ಯ ಮಾಡಬಾರದು ಎಂದು ದೇಶದ ಬಂದೀಖಾನೆಗಳ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ರಚಿಸಿದ್ದ ಸಮಿತಿಯು ಶಿಫಾರಸು ಮಾಡಿದೆ.
ನಿವೃತ್ತ ನ್ಯಾಯಮೂರ್ತಿ ಅಮಿತವ ರಾಯ್ ನೇತೃತ್ವದ ಸಮಿತಿಯು ಈ ಕುರಿತು ಸುಪೀಂ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದೆ.
ಕಾರಾಗೃಹದ ಸಿಬ್ಬಂದಿ ಸೇರಿದಂತೆ ಅಪರಾಧಿಗಳ ಸುಧಾರಣೆ ಮತ್ತು ಪುನರ್ವಸತಿ ಗುರಿ ಹೊಂದಿರುವ ಸೇವಾ ಆಡಳಿತದ ಸಿಬ್ಬಂದಿಯು ಇಂತಹ ಕೈದಿಗಳೊಂದಿಗೆ ಸೂಕ್ತ ಸಂವಹನ ನಡೆಸಬೇಕಿದೆ. ಇದಕ್ಕೆ ಪೂರಕವಾಗಿ ಈ ಸಿಬ್ಬಂದಿಗೆ ಸಮರ್ಪಕ ಹಾಗೂ ನಿಯಮಿತವಾಗಿ ತರಬೇತಿ ನೀಡಬೇಕು ಎಂದು ಸಮಿತಿಯು ಹೇಳಿದೆ.
ಜೈಲುಗಳಲ್ಲಿ ನಿಂದನೆ, ಕಿರುಕುಳ ಅಥವಾ ಹಿಂಸೆ ನೀಡುವುದಕ್ಕೆ ಕಡಿವಾಣ ಹಾಕಬೇಕಿದೆ. ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಮಾಜದ ಸಂಪನ್ಮೂಲ ವ್ಯಕ್ತಿಗಳಿಂದ ಸರಣಿ ಕಾರ್ಯಾಗಾರ ಮತ್ತು ತರಬೇತಿಗಳನ್ನು ಹಮ್ಮಿಕೊಳ್ಳುವುದರಿಂದ ಇದು ಫಲಕಾರಿಯಾಗಲಿದೆ ಎಂದು ಹೇಳಿದೆ.
ಲಿಂಗತ್ವ ಅಲ್ಪಸಂಖ್ಯಾತ ಕೈದಿಗಳ ಮೇಲಿನ ಹಿಂಸೆ, ತಾರತಮ್ಯ ಸೇರಿದಂತೆ ಇತರೇ ಅಪಾಯವನ್ನು ತಡೆಗಟ್ಟಲು ರಾಜ್ಯ ಸರ್ಕಾರಗಳು ಮತ್ತು ಕಾರಾಗೃಹ ಇಲಾಖೆಗಳು ಸೂಕ್ತ ಹಾಗೂ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.