ನವದೆಹಲಿ: ತಮ್ಮನ್ನು ಶಿಕ್ಷಕ ಹುದ್ದೆಯಿಂದ ಕಿತ್ತುಹಾಕಿರುವ ಎರಡು ಶಾಲೆಗಳ ಕ್ರಮದ ವಿರುದ್ಧ ಸಂತ್ರಸ್ತ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಸುಪ್ರಿಂ ಕೋರ್ಟ್ ಕದ ತಟ್ಟಿದ್ದಾರೆ.
ಅರ್ಜಿದಾರರು ಉತ್ತರ ಪ್ರದೇಶದ ಖಾಸಗಿ ಶಾಲೆಯೊಂದಕ್ಕೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದರು. ಬಳಿಕ ಅಲ್ಲಿನ ಉದ್ಯೋಗಿಗಳಿಗೆ ಅವರು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಎಂದು ಗೊತ್ತಾಗಿದ್ದಕ್ಕೆ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು.
ಬಳಿಕ ಇದೇ ವ್ಯಕ್ತಿ ಗುಜರಾತ್‌ನ ಜಾಮ್‌ನಗರದ ಖಾಸಗಿ ಶಾಲೆಯೊಂದಕ್ಕೆ ಸೇರಿದ್ದರು. ಬಳಿಕ ಅಲ್ಲಿಯೂ ಅದೇ ರೀತಿಯ ಸನ್ನಿವೇಶ ಎದುರಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಇದರಿಂದ ನೊಂದಿರುವ ಅವರು ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅವರ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದೆ. ನಾಲ್ಕು ವಾರಗಳ ನಂತರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ. ಪರ್ದಿವಾಲ್ ಅವರ ನೇತೃತ್ವದ ಪೀಠ, ಉತ್ತರ ಪ್ರದೇಶ ಸರ್ಕಾರ, ಗುಜರಾತ್ ಸರ್ಕಾರ ಹಾಗೂ ಸಂಬಂಧಿಸಿದ ಎರಡು ಶಾಲೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಹೈಕೋರ್ಟ್‌ನಲ್ಲಿ ನನ್ನ ಅರ್ಜಿಯನ್ನು ಮಾನ್ಯ ಮಾಡಿಲ್ಲ ಎಂದು ಸಂತ್ರಸ್ತ ವ್ಯಕ್ತಿ ದೂರಿದ್ದಾರೆ. ನನಗೆ ನ್ಯಾಯ ದೊರಕಿಸಿ, ನನ್ನ ಮೂಲಭೂತ ಹಕ್ಕನ್ನು ರಕ್ಷಿಸಬೇಕು ಎಂದು ಅವರು ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.