ADVERTISEMENT

ಮಹಾರಾಷ್ಟ್ರ: ಬಸ್‌ ನೌಕರರ ಮುಷ್ಕರ

ಪಿಟಿಐ
Published 3 ಸೆಪ್ಟೆಂಬರ್ 2024, 15:21 IST
Last Updated 3 ಸೆಪ್ಟೆಂಬರ್ 2024, 15:21 IST
<div class="paragraphs"><p>ಮಹಾರಾಷ್ಟ್ರದ ಕರಾಡ್‌ ಪ್ರದೇಶದಲ್ಲಿ ಮಂಗಳವಾರ ಬಸ್‌ ಸಂಚಾರ ಸ್ಥಗಿತಗೊಂಡಿತ್ತು </p></div>

ಮಹಾರಾಷ್ಟ್ರದ ಕರಾಡ್‌ ಪ್ರದೇಶದಲ್ಲಿ ಮಂಗಳವಾರ ಬಸ್‌ ಸಂಚಾರ ಸ್ಥಗಿತಗೊಂಡಿತ್ತು

   

–ಪಿಟಿಐ ಚಿತ್ರ

ಮುಂಬೈ: ‘ಸರ್ಕಾರಿ ನೌಕಕರಿಗೆ ನೀಡುವ ಸಂಬಳವನ್ನೇ ನಮಗೂ ನೀಡಿ’ ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಮಹಾರಾಷ್ಟ್ರ ರಾಜ್ಯ ಸಾರಿಗೆ ಕಾಮ್‌ದಾರ್‌ ಸಂಯುಕ್ತ ಕೃತಿ ಸಮಿತಿ‘ ಮಂಗಳವಾರ ಮುಷ್ಕರ ಆರಂಭಿಸಿದೆ.‌ ಇದರಿಂದಾಗಿ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ (ಎಂಎಸ್‌ಆರ್‌ಟಿಸಿ) ಭಾರಿ ಹೊಡೆತ ಬಿದ್ದಿದೆ.

ADVERTISEMENT

ರಾಜ್ಯದಲ್ಲಿನ 250 ಡಿಪೊಗಳ ಪೈಕಿ 35 ಡಿಪೊಗಳಲ್ಲಿ ಮುಷ್ಕರ ನಡೆಯುತ್ತಿದ್ದು, ಉಳಿದವುಗಳಲ್ಲಿ ಭಾಗಶಃ ಮುಷ್ಕರ ನಡೆಯುತ್ತಿದೆ.

ದೇಶದ ಸರ್ಕಾರಿ ಸಂಚಾರ ನಿಗಮಗಳಲ್ಲಿಯೇ ಎಂಎಸ್‌ಆರ್‌ಟಿಸಿಯು ಬಹುದೊಡ್ಡ ನಿಗಮವಾಗಿದೆ. ಸುಮಾರು 15 ಸಾವಿರ ಬಸ್‌ಗಳು ಹಾಗೂ 90 ಸಾವಿರ ನೌಕರರು ಇದ್ದಾರೆ. ಸುಮಾರು 60 ಲಕ್ಷ ಜನರು ಪ್ರತಿದಿನ ಎಂಎಸ್‌ಆರ್‌ಟಿಸಿಯಲ್ಲಿ ಸಂಚರಿಸುತ್ತಾರೆ. ರಾಜ್ಯದಲ್ಲಿ ಭಾರಿ ವಿಜೃಂಬಣೆಯಿಂದ ಸುಮಾರು 10 ದಿನಗಳ ಕಾಲ ನಡೆಯುವ ಗಣೇಶ ಹಬ್ಬವೂ ಆರಂಭಗೊಂಡಿದ್ದು, ಮುಷ್ಕರದಿಂದಾಗಿ ಸಂಚಾರಕ್ಕೆ ಭಾರಿ ಹೊಡೆತ ಬೀಳಲಿದೆ.

2021ರ ಅಕ್ಟೋಬರ್‌ನಲ್ಲಿಯೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಮಿತಿಯು ಹಲವು ತಿಂಗಳು ಮುಷ್ಕರ ಹೂಡಿತ್ತು. ಬಾಂಬೆ ಹೈಕೋರ್ಟ್‌ನ ಮಧ್ಯಪ್ರವೇಶದ ಕಾರಣ, ಸಮಿತಿಯು 2022ರ ಏಪ್ರಿಲ್‌ನಲ್ಲಿ ಮುಷ್ಕರ ಕೈಬಿಟ್ಟಿತ್ತು. ಎರಡು ವರ್ಷಗಳ ಬಳಿಕವೂ ತಮ್ಮ ಬೇಡಿಕೆ ಈಡೇರದ ಕಾರಣದಿಂದಾಗಿ ಸಮಿತಿಯು ಈ ಮತ್ತೊಮ್ಮೆ ಮುಷ್ಕರಕ್ಕೆ ಕರೆ ನೀಡಿದೆ. ಮಹಾರಾಷ್ಟ್ರ ರಾಜ್ಯ ಸಾರಿಗೆ ಕಾಮ್‌ದಾರ್‌ ಸಂಯುಕ್ತ ಕೃತಿ ಸಮಿತಿಯಲ್ಲಿ ಒಟ್ಟು 11 ಕಾರ್ಮಿಕ ಸಂಘಟನೆಗಳು ಸೇರಿಕೊಂಡಿವೆ.

ಕೈಗಾರಿಕೆ ಸಚಿವ ಉದಯ್‌ ಸಮಂತ್‌ ಅವರೊಂದಿಗೆ ಸಮಿತಿಯು ಮಾತುಕತೆ ನಡೆಸಿದೆ. ಆದರೆ, ಮಾತುಕತೆ ಫಲಪ್ರದವಾಗಿಲ್ಲ. ಈಗ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಬುಧವಾರ ಮಾತುಕತೆ ನಡೆಸಲಿದ್ದಾರೆ. ‘ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಈ ಹೋರಾಟ ನಿಲ್ಲದು’ ಎಂದು ಸಮಿತಿಯ ಸಂಚಾಲಕ ಸಂದೀಪ್‌ ಶಿಂದೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.