ಚೆನ್ನೆೈ:ತಮಿಳುನಾಡಿನ ಇಬ್ಬರು ವೃದ್ಧ ಸಹೋದರಿಯರು ತಾವು ದಶಕದಿಂದ ಕೂಡಿಟ್ಟಿದ್ದ ₹46 ಸಾವಿರ ಹಣವನ್ನು, ನೋಟು ರದ್ಧತಿಯ ಕಾರಣದಿಂದ ಕಳೆದುಕೊಂಡಿದ್ದಾರೆ.
ತಿರುಪ್ಪುರ್ ಜಿಲ್ಲೆಯ ಕೆ. ರಂಗಮ್ಮಾಳ್ (75) ಹಾಗೂ ಪಿ. ತಂಗಮ್ಮಾಳ್ (72), ಮೇಕೆ ಸಾಕಾಣಿಕೆಯಿಂದ ಬಂದ ಹಣದಲ್ಲಿ ಕ್ರಮವಾಗಿ ₹26 ಸಾವಿರ ಹಾಗೂ ₹22 ಸಾವಿರ ನಗದನ್ನು ತಮ್ಮ ಮಕ್ಕಳಿಗೆ ತಿಳಿಯದಂತೆ ಕೂಡಿಟ್ಟಿದ್ದರು.
ತಂಗಮ್ಮಾಳ್ ಅವರಿಗೆ ಆರೋಗ್ಯ ಹದಗೆಟ್ಟು, ಆಸ್ಪತ್ರೆಗೆ ರದ್ಧಾದ ನೋಟಿನೊಂದಿಗೆ ಹೋಗಿದ್ದಾರೆ. ಆಗಲೇ ಇಬ್ಬರಿಗೂ ತಮ್ಮ ಬಳಿ ಇರುವ ನೋಟು ಚಲಾವಣೆಯಲ್ಲಿ ಇಲ್ಲ ಎನ್ನುವುದು ತಿಳಿದುಬಂದಿದೆ.
ತಾವು ದಶಕಗಳಿಂದ ಕೂಡಿಟ್ಟಿದ್ದ ಹಣ, ಇಂದು ಚಾಲನೆಯಲ್ಲಿ ಇಲ್ಲ ಎನ್ನುವುದನ್ನು ತಿಳಿದ ಇಬ್ಬರು ಸಹೋದರಿಯರು ಆಘಾತಕ್ಕೊಳಗಾಗಿದ್ದಾರೆ. ಆದರೆ, ಶುಕ್ರವಾರ ಅವರಿಗೆ ತುಸು ಸಮಾಧಾನ ದೊರಕಿದೆ. ತಿರುಪ್ಪುರ ಜಿಲ್ಲೆಯ ಜಿಲ್ಲಾಧಿಕಾರಿ ಇಬ್ಬರಿಗೂ ₹1 ಸಾವಿರ ಮಾಸಾಶನ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆಯ ಆದೇಶ ನೀಡಿದ್ದಾರೆ.
2016ರಲ್ಲಿ ನೋಟು ರದ್ಧತಿಯಾದ ಬಳಿಕ, ದುಟ್ಟು ಕೂಡಿಟ್ಟಿರುವುದರ ಕುರಿತು ಮಕ್ಕಳುಇಬ್ಬರು ಸಹೋದರಿಯರನ್ನು ವಿಚಾರಿಸಿದ್ದಾರೆ. ಆದರೆ, ಇವರು ತಮ್ಮ ಬಳಿ ಹಣ ಇಲ್ಲ ಎಂದಿದ್ದಾರೆ.
‘ನಾವು ನೋಟು ರದ್ಧಾದ ಬಳಿಕ ಅವರಲ್ಲಿ ಹಣ ಇದೆಯೇ ಎಂದು ಕೇಳಿದ್ದೇವು. ಆದರೆ, ಅವರು ಇಲ್ಲ ಎಂದೇ ಹೇಳಿದ್ದರು. ಬಹುಶಃ ಅವರು ಕೂಡಿಟ್ಟಿದ್ದ ಹಣದ ಬಗ್ಗೆ ನಮಗೆ ಗೊತ್ತಾಗಿ ಬಿಡುತ್ತದೆ ಎನ್ನುವ ಕಾರಣದಿಂದ ಹೇಳಿರಲಿಲ್ಲ ಎನಿಸುತ್ತದೆ. ₹500 ಮುಖಬೆಲೆಯ ನೋಟು ರದ್ಧಾಗಿದೆ ಎಂದು ನಾವು ಹೇಳಿದಾಗಲೂ ಅವರು ನಂಬಿರಲಿಲ್ಲ’ ಎಂದು ರಂಗಮ್ಮಾಳ್ ಅವರ ಮಗ ಸೆಲ್ವರಾಜ್ ಹೇಳಿದರು.
ಈ ಬಗ್ಗೆ ಮಾಧ್ಯಮದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೃದ್ಧ ಸಹೋದರಿಯರಿಗೆ ಸಹಾಯ ಮಾಡಿ ಎನ್ನುವ ಸುದ್ದಿ ಹರಡುತ್ತಿದ್ದಂತೆ, ತಿರುಪ್ಪುರ್ ಜಿಲ್ಲಾಧಿಕಾರಿ ಡಾ. ಕೆ ವಿಜಯಕಾರ್ತಿಕೇಯನ್ ಅವರು ಇಬ್ಬರನ್ನು ಕಚೇರಿಗೆ ಕರೆದು ಮಾಸಾಶನ ಆದೇಶದ ಬಗ್ಗೆ ಮಾಹಿತಿ ನೀಡಿದರು.
ತಾನೇನು ಮಾಡಲಿ ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿತ್ತು. ಆದ್ದರಿಂದ ಇಬ್ಬರ ಸಹಾಯಕ್ಕೆ ಮಾಸಾಶನ ನೀಡುವ ಯೋಚನೆ ಮಾಡಿದೆ
ವಿಜಯಕಾರ್ತೀಕೇಯನ್, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.