ಮುಂಬೈ: ‘ಕಳೆದ ಒಂಬತ್ತು ವರ್ಷಗಳಿಂದ ನನ್ನನ್ನು ಹೇಗೆ ನೋಡುತ್ತಿದ್ದಿರೊ ಈಗಲೂ ಹಾಗೆಯೇ ನಡೆಸಿಕೊಳ್ಳಿ. ನನ್ನಲ್ಲಿ ಏನೂ ಬದಲಾಗಿಲ್ಲ’ ಎಂದು ಠಾಕ್ರೆ ಕುಟುಂಬದಲ್ಲಿ ಮೊದಲ ಚುನಾವಣೆ ಎದುರಿಸಿದ ಕುಡಿ ಆದಿತ್ಯ ಠಾಕ್ರೆ ಮಾಧ್ಯಮಗಳಿಗೆ ಮನವಿ ಮಾಡಿದರು.
70 ಸಾವಿರ ಮತಗಳ ಅಂತರದಲ್ಲಿ ವರ್ಲಿ ವಿಧಾನಸಭಾ ಕ್ಷೇತ್ರದಿಂದ ಆದಿತ್ಯ ಅವರಿಗೆ ಸುಲಭದ ಜಯ ದೊರೆತಿದೆ. 288 ವಿಧಾನಸಭಾ ಸ್ಥಾನಗಳಲ್ಲಿ ಶಿವಸೇನಾ 54 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ:ಮಹಾರಾಷ್ಟ್ರದ ‘ರೈಸಿಂಗ್ ಸ್ಟಾರ್’ ಆದಿತ್ಯ ಠಾಕ್ರೆ
ಆದಿತ್ಯಗೆ ಇಷ್ಟು ದೊಡ್ಡ ಗೆಲುವು ದೊರೆತಿರುವುದರಿಂದ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಸ್ಥಾನಕ್ಕೆ ಅವರನ್ನು ನೇಮಿಸುವಂತೆ ಶಿವಸೇನೆ ಪಟ್ಟು ಹಿಡಿಯುವ ಸಾಧ್ಯತೆ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಈ ಬಗ್ಗೆ ಪ್ರತಿಕ್ರಿಯಿಸಲು ಆದಿತ್ಯ ನಿರಾಕರಿಸಿದರು.
‘ಸೇನಾ ಬಗ್ಗೆ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ತೋರಿರುವ ಈ ಕ್ಷಣ ಹೆಮ್ಮೆ ಎನ್ನಿಸುತ್ತಿದೆ. ನನ್ನನ್ನು ಈ ಮೊದಲಿನಂತೆಯೇ ನೋಡಿ, ಸಲಹೆಗಳನ್ನು ನೀಡಿ. ನನ್ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ’ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಸೇನಾಯ ಭದ್ರಕೋಟೆ ಎನಿಸಿರುವ ವರ್ಲಿ ಕ್ಷೇತ್ರದಲ್ಲಿ ಆದಿತ್ಯ ಅವರಿಗೆ ಗೆಲುವು ಖಚಿತ ಎಂದು ಮೊದಲೆ ಊಹಿಸಲಾಗಿತ್ತು. ಬಾಳ ಠಾಕ್ರೆ ಅವರು 1966ರಲ್ಲಿ ಶಿವಸೇನಾವನ್ನು ಪ್ರಾರಂಭಿದಾಗಿನಿಂದಲೂ ಈ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.
ಆದಿತ್ಯ ಅವರ ಮಾತು, ಪ್ರತಿಭಟನೆ. ಕಾಲ್ನಡಿಗೆಗಳಿಂದ ಚುನಾವಣೆಗೂ ಮುನ್ನವೇ ಶಿವಸೇನೆಯ ಉತ್ತಮ ಅಭ್ಯರ್ಥಿ ಎಂದೇ ಅವರು ಬಿಂಬಿತರಾಗಿದ್ದರು. ಆದಿತ್ಯ ರಾಜಕೀಯಕ್ಕೆ ಕಾಲಿಟ್ಟಿದ್ದರಿಂದ ಸೇನೆಗೆ ಹೊಸದೊಂದು ಆಯಾಮ ದೊರೆತಂತಾಗಿದೆ.ತನ್ನ ಕ್ಷೇತ್ರವನ್ನು ಅಭಿವೃದ್ಧಿಗೆ ಮಾದರಿಯನ್ನಾಗಿ ರೂಪಿಸಲಾಗುವುದು ಎಂದು ಆದಿತ್ಯ ಹೇಳಿದ್ದಾರೆ.
‘ನನ್ನ ಕ್ಷೇತ್ರದ ಶಾಸಕನಾಗಿ ಟೀಕೆ ಮತ್ತು ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ನಾನು ಸದಾ ಸಿದ್ಧ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರೆ ಅಭ್ಯರ್ಥಿಗಳಿಗೂ ಧನ್ಯವಾದಗಳು. ಇದು ಜನರ ಶಕ್ತಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.