ರಾಯಪುರ: ಬಿಜೆಪಿ ಶಾಸಕ ವಿಷ್ಣುದೇವ್ ಸಾಯ್ ಅವರು ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
'ಚುನಾವಣೆಯಲ್ಲಿ ಬಿಜೆಪಿಯು ಐತಿಹಾಸಿಕ ಗೆಲುವು ಸಾಧಿಸಿರುವಂತೆಯೇ, ಸಾಯ್ ಮತ್ತು ಸಚಿವ ಸಂಪುಟದ ಪ್ರಮಾಣವಚನ ಕಾರ್ಯಕ್ರಮವೂ ಐತಿಹಾಸಿಕವಾಗಲಿದೆ' ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಅರುಣ್ ಸಾವ್ ಹೇಳಿದ್ದಾರೆ.
ಕುಂಕುರಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಬುಡಕಟ್ಟು ಸಮುದಾಯದ ಪ್ರಭಾವಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಾಯ್ ಅವರನ್ನು, ಡಿಸೆಂಬರ್ 10ರಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗುತ್ತಿದ್ದಂತೆಯೇ ಸಾಯ್ ಅವರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.
ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸರಗುಜಾ ಪ್ರದೇಶದಲ್ಲಿನ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಹೀಗಾಗಿ, ಸಾಯ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲವಾಗಿ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾವ್, ರೇಣುಕಾ ಸಿಂಗ್ ಅವರೂ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಹೊಸ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ ಸಿಗಲಿದೆ, ಇಬ್ಬರು ಉಪಮುಖ್ಯಮಂತ್ರಿಗಳ ನೇಮಕವಾಗಲಿದೆಯೇ ಎಂಬ ಊಹಾಪೋಹಗಳು ಚಾಲ್ತಿಯಲ್ಲಿವೆ. ಇದರ ನಡುವೆ ಸಾವೊ ಅವರು, 'ಸಚಿವರಾಗಿ ಎಷ್ಟು ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು' ಎಂದು ಹೇಳಿದ್ದಾರೆ.
90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿದೆ. ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
50 ಸಾವಿರ ಜನ ಭಾಗಿ ಸಾಧ್ಯತೆ
ಪ್ರಮಾಣ ವಚನ ಸ್ವೀಕಾರ ಸಮಾರಂಭವು ರಾಯಪುರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. 50,000ಕ್ಕೂ ಅಧಿಕ ಜನರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದೆ.
'ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಗಣ್ಯರು, ವಿಚಾರವಾದಿಗಳು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ' ಎಂದು ಸಾವೊ ತಿಳಿಸಿದ್ದಾರೆ.
ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.