ಕೋಟಯಂ/ಕೊಚ್ಚಿ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯ ಅಥವಾ ಪದ್ಧತಿಗಳ ಉಲ್ಲಂಘನೆಯಾಗದಂತೆ ಕಾವಲು ಕಾಯುವುದಾಗಿ ಬುಡಕಟ್ಟು ಸಮುದಾಯವಾದ ಐಕ್ಯ ಮಲೆ ಅರಯನ್ ಹೇಳಿದೆ.
ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಮುದಾಯವು ಈ ಹೇಳಿಕೆ ನೀಡಿದೆ.
ದೇಗುಲದಲ್ಲಿನ ಕೆಲವು ಸಂಪ್ರದಾಯ, ಆಚರಣೆಗಳ ಹಕ್ಕನ್ನು ಈ ಸಮುದಾಯ ಹೊಂದಿದೆ. ಇಂತಹ ಸಂಪ್ರದಾಯಗಳ ರಕ್ಷಣೆಗಾಗಿ ವಿನಯದಿಂದಲೇ ಪ್ರತಿಭಟಿಸುವುದಾಗಿಯೂ ಸಮುದಾಯ ಹೇಳಿದೆ.ಈ ಐಕ್ಯ ಮಲೆ ಅರಯನ್ ಸಮುದಾಯದ ಪೂರ್ವಜರು ಶಬರಿಮಲೆ ಸೇರಿದಂತೆ ಸುತ್ತಲಿನ 18 ಬೆಟ್ಟಗಳಲ್ಲಿ ವಾಸವಿದ್ದರು. ಅಲ್ಲದೆ, ಇವರು ಅಯ್ಯಪ್ಪದೇವರಿಗೆ ಹತ್ತಿರದವರಾಗಿದ್ದರು ಎಂದು ನಂಬಲಾಗಿದೆ.
‘18 ಬೆಟ್ಟಗಳಲ್ಲಿಯೂ ನಮ್ಮ ಸಮುದಾಯದ ಕಣ್ಗಾವಲು ಇರಲಿದೆ. ಸಂಪ್ರದಾಯ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ’ ಎಂದು ಐಕ್ಯ ಮಲೆ ಅರಯನ್ ಮಹಾಸಭಾ ಹೇಳಿದೆ.
ಮಹಿಳಾ ಪೊಲೀಸ್ ನಿಯೋಜನೆ: ‘ಅಯ್ಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಮಹಿಳಾ ಭಕ್ತಾದಿಗಳ ರಕ್ಷಣೆಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದು’ ಎಂದು ಕೇರಳ ಪೊಲೀಸ್ ವರಿಷ್ಠ ಲೋಕನಾಥ ಬೆಹೆರಾ ಶುಕ್ರವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.