ADVERTISEMENT

ರಾಜಸ್ಥಾನ ಶಿಕ್ಷಣ ಸಚಿವರ ವಿವಾದಾತ್ಮಕ ಹೇಳಿಕೆ: ಆದಿವಾಸಿಗಳ ವಿಶಿಷ್ಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:08 IST
Last Updated 29 ಜೂನ್ 2024, 15:08 IST
<div class="paragraphs"><p>ರಾಜಸ್ಥಾನದಲ್ಲಿ ಪ್ರತಿಭಟನೆ</p></div>

ರಾಜಸ್ಥಾನದಲ್ಲಿ ಪ್ರತಿಭಟನೆ

   

ಜೈಪುರ: ‘ಬುಡಕಟ್ಟು ಜನಾಂಗದವರು ನಿಜವಾಗಿಯೂ ಹಿಂದೂಗಳೇ’ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಬನ್ಸ್‌ವಾಡದ ಸಂಸದ ರಾಜ್‌ಕುಮಾರ್ ರೋಟ್ ನೇತೃತ್ವದಲ್ಲಿ ಆದಿವಾಸಿಗಳು ಶನಿವಾರ ತಮ್ಮ ರಕ್ತದ ಮಾದರಿಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.

‘ಆದಿವಾಸಿಗಳು ವಿಭಿನ್ನ ಆಚರಣೆಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುವುದರಿಂದ ಮತ್ತು ಹಿಂದೂ ಧರ್ಮಕ್ಕೆ ಭಿನ್ನವಾದ ನಂಬಿಕೆಯನ್ನು ಅನುಸರಿಸುವುದರಿಂದ ಹಿಂದೂಗಳಿಗಿಂತ ಭಿನ್ನರಾಗಿದ್ದಾರೆ’ ಎಂದು ರೋಟ್ ಸಂದರ್ಶನವೊಂದರಲ್ಲಿ ಹೇಳಿದ ನಂತರ ಆದಿವಾಸಿಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.  

ADVERTISEMENT

ರೋಟ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಮದನ್‌ ದಿಲಾವರ್, ಭಾರತ್ ಆದಿವಾಸಿ ಪಕ್ಷದ (ಬಿಎಪಿ) ನಾಯಕ ತನ್ನನ್ನು ತಾನು ಹಿಂದೂ ಎಂದು ಪರಿಗಣಿಸದಿದ್ದರೆ, ಅವನು ನಿಜವಾಗಿಯೂ ಹಿಂದೂವಿನ ಮಗನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದರು.

ಇದರಿಂದ ಕುಪಿತಗೊಂಡಿರುವ ಆದಿವಾಸಿಗಳು ತಮ್ಮ ರಕ್ತದ ಮಾದರಿಗಳನ್ನು ಪರೀಕ್ಷಿಸಲು ಸಚಿವರಿಗೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ, ಇದಕ್ಕೆ ಅವಕಾಶ ನೀಡದ ಪೊಲೀಸರು ಮೊದಲು ರಕ್ತದ ಮಾದರಿಗಳನ್ನು ಪಡೆದುಕೊಂಡರೂ, ನಂತರ ಅವುಗಳನ್ನು ಪ್ರತಿಭಟನಕಾರರಿಗೆ ಹಿಂತಿರುಗಿಸಿದರು.

ಆದಿವಾಸಿಗಳು ನಗರದ ಹೃದಯಭಾಗದಲ್ಲಿರುವ ಶಾಹಿದ್ ಸಮರಕ್‌ನಲ್ಲಿ ಪ್ರತಿಭಟನೆಗೆ ಸೇರಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರೋಟ್ ಅವರು, ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದ ಮಾದರಿಗಳನ್ನು ಹಸ್ತಾಂತರಿಸುವುದಾಗಿ ಹೇಳಿದರು. ಅಲ್ಲದೆ, ಈ ವಿಷಯವನ್ನು ವಿಧಾನಸಭೆ ಮತ್ತು ಸಂಸತ್ತಿನಲ್ಲೂ ಪ್ರಸ್ತಾಪಿಸಲಾಗುವುದು. ಇದು ಇಷ್ಟಕ್ಕೆ ಮುಗಿಯುವುದಿಲ್ಲ ಎಂದೂ ಎಚ್ಚರಿಕೆ ನೀಡಿದರು.

ಗಂಗಾಪುರದ ಕಾಂಗ್ರೆಸ್ ಶಾಸಕ ರಾಮಕೇಶ್ ಮೀನಾ ಕೂಡ ಪಾಲ್ಗೊಂಡಿದ್ದರು.    

ಬಿಜೆಪಿ ತಲ್ಲಣ: ಐದು ಉಪಚುನಾವಣೆಗಳು ಬರಲಿರುವುದರಿಂದ, ಈ ವಿವಾದವು ಬಿಜೆಪಿಯನ್ನು ಕೊಂಚ ತಲ್ಲಣಗೊಳಿಸಿದೆ.

ಮತ್ತೊಂದೆಡೆ, ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ, ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಹೆಸರುವಾಸಿಯಾಗಿರುವ ದಿಲಾವರ್, ಆದಿವಾಸಿಗಳನ್ನು ಯಾವಾಗಲೂ ಹಿಂದೂಗಳೆಂದು ಪರಿಗಣಿಸಲಾಗಿದೆ ಎಂದು ಹೇಳುವ ಮೂಲಕ ತಮ್ಮ ಮೊದಲಿನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.  

ಸಚಿವರು ತಮ್ಮ ಹೇಳಿಕೆಗೆ ಬುಡಕಟ್ಟು ಜನರ ಕ್ಷಮೆಯಾಚಿಸಿ ರಾಜೀನಾಮೆ ನೀಡುವವರೆಗೂ ನಾವು ವಿಶ್ರಮಿಸುವುದಿಲ್ಲ
–ರಾಜ್‌ಕುಮಾರ್ ರೋಟ್ ಬನ್ಸ್‌ವಾಡ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.