ಕೋಲ್ಕತ್ತ: ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ನಾಯಕ ಕುಂತಲ್ ಘೋಷ್‌ರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಇಲ್ಲಿನ ಚಿನಾರ್ ಪಾರ್ಕ್‌ನಲ್ಲಿರುವ ಕುಂತಲ್ ಘೋಷ್ ಅವರ ಐಷಾರಾಮಿ ಮನೆಗೆ ಶುಕ್ರವಾರ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು. ಕುಂತಲ್ ಅವರನ್ನು ಸುದೀರ್ಘ ವಿಚಾರಣೆಗೂ ಒಳಪಡಿಸಿದ್ದರು.
ವಿಚಾರಣೆಗೆ ಸಹಕರಿಸದ ಕಾರಣ ಅವರನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಂತಲ್ ಘೋಷ್ ಮಾತ್ರವಲ್ಲದೇ ಟಿಎಂಸಿ ಪಕ್ಷದ ಇತರೆ ನಾಯಕರ ಮನೆಗಳ ಮೇಲೂ ಶುಕ್ರವಾರ ದಾಳಿ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
2014ರಿಂದ 2021ರ ಅವಧಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಟಿಎಂಸಿ ನಾಯಕರು ಹಣ ಪಡೆದಿದ್ದಾರೆ ಎಂಬ ಆರೋಪದಡಿಯಲ್ಲಿ ಸಿಬಿಐ ತನಿಖೆ ನಡೆಸಿತ್ತು. ನಂತದ ದಿನಗಳಲ್ಲಿ ಈ ಪ್ರಕರಣವನ್ನು ಇ.ಡಿಗೆ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಬಂಧನವಾಗಿದೆ. ಹಲವಾರು ಟಿಎಂಸಿ ನಾಯಕರುಗಳ ಮೇಲೂ ಇ.ಡಿ ದಾಳಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.