ADVERTISEMENT

ಲೋಕಸಭೆ: ತ್ರಿವಳಿ ತಲಾಖ್‌ ನಿಷೇಧಕ್ಕೆ ಮಸೂದೆ ಮಂಡನೆ

ಏಕರೂಪದ ಕಾಯ್ದೆ ರೂಪಿಸಿ –ಕಾಂಗ್ರೆಸ್; ಮಹಿಳೆಯ ಘನತೆ ಪ್ರಶ್ನೆ–ಸರ್ಕಾರ

ಪಿಟಿಐ
Published 21 ಜೂನ್ 2019, 20:00 IST
Last Updated 21 ಜೂನ್ 2019, 20:00 IST
   

ನವದೆಹಲಿ: ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸುವ ಕುರಿತ ಮಸೂದೆಯನ್ನು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿತು. ‘ಇದು, ಸಂವಿಧಾನದ ಉಲ್ಲಂಘನೆ’ ಎಂದು ಪ್ರತಿಪಕ್ಷದ ಸದಸ್ಯರು ಟೀಕಿಸಿದರು.

‘ಮುಸ್ಲಿಂ ಮಹಿಳೆ (ವಿವಾಹ ಹಕ್ಕು ರಕ್ಷಣೆ) ಮಸೂದೆ 2019’, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮಂಡಿಸುತ್ತಿರುವ ಮೊದಲ ಮಸೂದೆಯಾಗಿದೆ.

‘ಲಿಂಗ ಸಮಾನತೆ ಮತ್ತು ನ್ಯಾಯ ಒದಗಿಸಲು ಈ ಕಾಯ್ದೆ ಅಗತ್ಯ. ಇದು ಧರ್ಮದ ಪ್ರಶ್ನೆಯಲ್ಲ, ಮಹಿಳೆಯರಿಗೆ ನ್ಯಾಯ ಒದಗಿಸುವುದರ ಪ್ರಶ್ನೆ’ ಎಂದು ಮಸೂದೆ ಮಂಡಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಪ್ರತಿಪಾದಿಸಿದರು.

ADVERTISEMENT

ಇದಕ್ಕೂ ಮೊದಲು ಮಸೂದೆ ಮಂಡಿಸುವ ವಿಷಯವನ್ನು ಮತಕ್ಕೆ ಹಾಕಲಾಯಿತು. 186 ಸದಸ್ಯರು ಮಸೂದೆಯನ್ನು ಬೆಂಬಲಿಸಿದರೆ, 74 ಸದಸ್ಯರು ವಿರೋಧಿಸಿದರು.

ಮಸೂದೆ ಮಂಡನೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸಚಿವರು, ‘ದೇಶದಲ್ಲಿ ತ್ರಿವಳಿ ತಲಾಖ್‌ನ543 ಪ್ರಕರಣಗಳು ವರದಿಯಾಗಿವೆ. ಈ ಪದ್ಧತಿಯನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ ತೀರ್ಪು ನಂತರವೂ 200 ಪ್ರಕರಣಗಳು ವರದಿಯಾಗಿವೆ’ ಎಂದು ಅಂಕಿ ಅಂಶ ನೀಡಿದರು. ‘ಇದು, ಮಹಿಳೆಯ ಘನತೆಯ ಪ್ರಶ್ನೆ. ಅದನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ’ ಎಂದರು.ಇದಕ್ಕೂ ಮುನ್ನ ಸ್ಪೀಕರ್ ಓಂ ಬಿರ್ಲಾ ಅವರು ಮಸೂದೆಯನ್ನು ಮಂಡಿಸಲು ಸಚಿವರಿಗೆ ಸೂಚಿಸಿದಂತೆ, ಪ್ರತಿಪಕ್ಷ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.

ಕಾಂಗ್ರೆಸ್‌ ಪಕ್ಷದ ಶಶಿ ತರೂರ್‌ ಅವರು, ‘ತ್ರಿವಳಿ ತಲಾಖ್‌ ಪದ್ಧತಿಗೆ ನನ್ನವಿರೋಧವಿದೆ. ಸಿವಿಲ್ ಮತ್ತು ಕ್ರಿಮಿನಲ್‌ ಕಾಯ್ದೆ ಜೊತೆಗೆ ಸಂಯೋಜನೆ ಆಗಲಿದೆ ಎಂಬ ಕಾರಣಕ್ಕೆ ಮಸೂದೆಯನ್ನು ವಿರೋಧಿಸುತ್ತೇನೆ’ ಎಂದರು. ಆರ್‌ಎಸ್‌ಪಿ ಸದಸ್ಯ ಎನ್.ಕೆ. ಪ್ರೇಮಚಂದ್ರನ್‌ ಅವರೂ ಮಸೂದೆ ವಿರೋಧಿಸಿದರು.

ಎಐಎಂಐಎಂ ಸದಸ್ಯ ಅಸಾದುದ್ದೀನ್‌ ಒವೈಸಿ ಅವರು, ‘ಮಸೂದೆ ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಲಿದೆ. ಇದರ ಪ್ರಕಾರ ತಪ್ಪಿತಸ್ಥ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಬಹುದು. ಇಂಥದೇ ಅಪರಾಧಕ್ಕಾಗಿ ಮುಸ್ಲಿಂಯೇತರರಿಗೆ ಒಂದು ವರ್ಷ ಜೈಲು ಸಜೆ ವಿಧಿಸಲಾಗುತ್ತದೆ’ ಎಂದು ಆಕ್ಷೇಪಿಸಿದರು.

16ನೇ ಲೋಕಸಭೆಯಲ್ಲಿಯೂಮೋದಿ ಸರ್ಕಾರ ಮಸೂದೆ ಮಂಡಿಸಿದ್ದು, ರಾಜ್ಯಸಭೆಯ ಅನುಮೋದನೆ ಬಾಕಿ ಇತ್ತು. ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿ ಕೇಂದ್ರ ಸರ್ಕಾರ ಎರಡು ಬಾರಿ ಅಂದರೆ 2018ರ ಸೆಪ್ಟೆಂಬರ್‌, 2019 ಫೆಬ್ರುವರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿತ್ತು.

ಈ ಪ್ರಕಾರ, ತ್ರಿವಳಿ ತಲಾಖ್‌ ಹೇಳಿ ಪತ್ನಿಗೆ ವಿಚ್ಛೇದನ ನೀಡುವುದು ಕಾನೂನು ಬಾಹಿರವಾಗಿದ್ದು, ತಪ್ಪಿತಸ್ಥರಿಗೆ ಮೂರು ವರ್ಷ ಜೈಲು ಸಜೆ ವಿಧಿಸಲು ಅವಕಾಶವಿದೆ. ಕಾಯ್ದೆ ದುರ್ಬಳಕೆ ಆಗಬಹುದು ಎಂಬ ಆಂತಕ ವ್ಯಕ್ತವಾದಾಗ, ಆರೋಪಿಗಳು ವಿಚಾರಣೆ ಹಂತದಲ್ಲಿ ಜಾಮೀನು ಪಡೆಯುವಂತೆ ನಿಯಮ ರೂಪಿಸಲಾಗಿತ್ತು.

* ಮಸೂದೆ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದೆ. ಆದರೆ, ಪತ್ನಿಯನ್ನು ಬಿಡುವ ಎಲ್ಲ ಪ್ರಕರಣಗಳಿಗೆ ಅನ್ವಯಿಸಿ ಏಕರೂಪದ ಕಾಯ್ದೆ ಆಗಬೇಕು

-ಶಶಿ ತರೂರ್‌, ಕಾಂಗ್ರೆಸ್

* ಬಿಜೆಪಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ಹೆಚ್ಚಿನ ಒಲವಿದೆ. ಆದರೆ, ಶಬರಿಮಲೆಗೆ ಹಿಂದೂ ಮಹಿಳೆಯರು ಹೋಗುವುದನ್ನು ವಿರೋಧಿಸುತ್ತದೆ

-ಅಸಾದುದ್ದೀನ್‌ ಒವೈಸಿ, ಎಐಎಂಐಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.