ADVERTISEMENT

ತ್ರಿವಳಿ ತಲಾಖ್ ನಿಷೇಧಕ್ಕೆ ರಾಜ್ಯಸಭೆ ಅನುಮೋದನೆ

ಪಿಟಿಐ
Published 30 ಜುಲೈ 2019, 19:45 IST
Last Updated 30 ಜುಲೈ 2019, 19:45 IST
   

ನವದೆಹಲಿ:ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಮತ್ತು ತ್ರಿವಳಿ ತಲಾಖ್ ನೀಡುವ ಪುರುಷನಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ಮಸೂದೆ–2019’ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.

ಆಡಳಿತಾರೂಢ ಬಿಜೆಪಿಯು ರಾಜ್ಯಸಭೆಯಲ್ಲಿ ಬಹುಮತ ಹೊಂದಿಲ್ಲ. ಆದರೆ, ಕೆಲವು ವಿರೋಧ ಪಕ್ಷಗಳು ಸದಸ್ಯರು ಸದನಕ್ಕೆ ಗೈರು ಹಾಜರಾಗಿದ್ದ ಮತ್ತು ವಿರೋಧ ಪಕ್ಷಗಳ ಕೆಲವು ಸದಸ್ಯರು ಸದನದಿಂದ ಹೊರನಡೆದ ಕಾರಣ ಮಸೂದೆಗೆ ಅನುಮೋದನೆ ಪಡೆಯುವುದು ಎನ್‌ಡಿಎಗೆ ಸುಲಭವಾಯಿತು.

242 ಸದಸ್ಯರ ರಾಜ್ಯಸಭೆಯಲ್ಲಿ ಎನ್‌ಡಿಎಯ ಬಲ 107 ಮಾತ್ರ. ಆದರೆ ಮಂಗಳವಾರ ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ ಹಲವು ಸದಸ್ಯರು ಸದನಕ್ಕೆ ಗೈರು ಹಾಜರಾಗಿದ್ದರು. ಅಲ್ಲದೆ ಚರ್ಚೆಯ ನಂತರ ಜೆಡಿಯು ಮತ್ತು ಎಐಎಡಿಎಂಕೆ ಸದಸ್ಯರು ಸದನದಿಂದ ಹೊರನಡೆದರು. ಇದರಿಂದ ಸದನದ ಬಲ 183ಕ್ಕೆ ಕುಸಿಯಿತು. ಬಿಜೆಡಿ ಮತ್ತು ಟಿಆರ್‌ಎಸ್ ಸದಸ್ಯರು ಮಸೂದೆ ಪರ ಮತ ಚಲಾಯಿಸಿದರು. ಮಸೂದೆ ಪರ 99 ಮತ್ತು ವಿರುದ್ಧ 84 ಮತಗಳು ಚಲಾವಣೆಯಾದವು.

ADVERTISEMENT

ಸದನದಲ್ಲಿ ಮಸೂದೆ ಮಂಡನೆಯಾದ ನಂತರ ಸುಮಾರು ನಾಲ್ಕೂವರೆ ತಾಸು ಚರ್ಚೆ ನಡೆಯಿತು. ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು.

ಕಾಂಗ್ರೆಸ್‌ ಸದಸ್ಯ ಗುಲಾಂ ನಬಿ ಆಜಾದ್ ಅವರು, ‘ಈ ಮಸೂದೆ ರಾಜಕೀಯ ಪ್ರೇರಿತವಾದುದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಈ ಆಕ್ಷೇಪವನ್ನು ನಿರಾಕರಿಸಿದರು. ವರದಕ್ಷಿಣೆ ನಿಷೇಧ ಮತ್ತಿತರ ಕಾನೂನುಗಳು ಹಿಂದೂ ಪುರುಷರಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುತ್ತವೆ. ಅದೇ ರೀತಿ ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪುರುಷರಿಗೆ ಜೈಲು ಶಿಕ್ಷೆ ವಿಧಿಸುವುದರಲ್ಲಿ ತಪ್ಪಿಲ್ಲ ಎಂದು ಸಚಿವರು ಪ್ರತಿಪಾದಿಸಿದರು.

ಮಸೂದೆಯ ಮುಖ್ಯಾಂಶಗಳು

* ತ್ರಿವಳಿ ತಲಾಖ್‌ ನೀಡುವುದು ಅಪರಾಧ. ತ್ರಿವಳಿ ತಲಾಖ್‌ ನೀಡಿದ ಸಂಬಂಧ ಸಂತ್ರಸ್ತ ಮಹಿಳೆ ಅಥವಾ ಆಕೆಯ ರಕ್ತಸಂಬಂಧಿಗಳು ದೂರು ನೀಡಿದರೆ ಮಾತ್ರ ಪ್ರಕರಣ ಮಾನ್ಯವಾಗುತ್ತದೆ

* ತ್ರಿವಳಿ ತಲಾಖ್‌ ನೀಡುವ ಪುರುಷನಿಗೆ ಮೂರು ವರ್ಷ ಜೈಲು ಶಿಕ್ಷೆ. ಆ ಪುರುಷನಿಗೆ ಜಾಮೀನು ಕೊಡಬಹುದು. ಆದರೆ ಸಂತ್ರಸ್ತ ಮಹಿಳೆಯ ಜತೆ ಸಮಾಲೋಚನೆ ನಡೆಸಿದ ನಂತರವಷ್ಟೇ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಬಹುದು

* ಸಂತ್ರಸ್ತ ಮಹಿಳೆಯು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಪರಿಹಾರ ಅಥವಾ ಭತ್ಯೆಯ ಮೊತ್ತವನ್ನು ಮ್ಯಾಜಿಸ್ಟ್ರೇಟ್‌ ನಿರ್ಧರಿಸುತ್ತಾರೆ

* ದಂಪತಿಯು ರಾಜಿ ಆಗುವುದಾದರೆ, ನಿಖಾ ಹಲಾಲ್ (ಮಹಿಳೆಯು ಬೇರೆ ಪುರುಷನೊಂದಿಗೆ ಮದುವೆಯಾಗಿ, ಆತನಿಂದ ವಿಚ್ಛೇದನ ಪಡೆದು, ಮೊದಲ ಪತಿಯೊಂದಿಗೆ ಮರುಮದುವೆ) ಇಲ್ಲದೆಯೇ ರಾಜಿಗೆ ಅವಕಾಶ

* ತ್ರಿವಳಿ ತಲಾಖ್ ನೀಡಿದ ಪುರುಷನನ್ನು ಜೈಲಿಗೆ ಕಳುಹಿಸಿದರೆ, ಸಂತ್ರಸ್ತ ಮಹಿಳೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಇದರಿಂದ ಆ ಸಂಸಾರ ಬೀದಿಗೆ ಬೀಳುತ್ತದೆ ಎಂಬುದು ವಿರೋಧ ಪಕ್ಷಗಳ ಪ್ರತಿಪಾದನೆ. ಜೈಲಿಗೆ ಕಳುಹಿಸುವ ಅಂಶವನ್ನು ಬದಲಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.