ನವದೆಹಲಿ: ತ್ರಿವಳಿ ತಲಾಖ್ ಮೂಲಕ ವಿವಾಹ ವಿಚ್ಛೇದನ ನೀಡುವ ಪದ್ಧತಿಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಿದ 2019ರ ಕಾನೂನನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
ಈ ಕಾನೂನಿನ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ತ್ರಿವಳಿ ತಲಾಖ್ ಪದ್ಧತಿಗೆ ಕಾನೂನಿನ ಮಾನ್ಯತೆ ಇರಲಿಲ್ಲ, ವೈವಾಹಿಕ ಬಂಧವನ್ನು ಇದ್ದಕ್ಕಿದ್ದಂತೆ ಕಡಿದುಕೊಳ್ಳಲು ಅವಕಾಶ ಕಲ್ಪಿಸುವ ಈ ಪದ್ಧತಿಗೆ ಧಾರ್ಮಿಕ ಅನುಮತಿ ಕೂಡ ಇರಲಿಲ್ಲ ಎಂದು ಕೇಂದ್ರವು ಹೇಳಿದೆ.
ತಲಾಖ್ ಎ ಬಿದ್ದತ್ (ಒಂದೇ ಬಾರಿಗೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದು) ಆಚರಣೆ, ಸಂಬಂಧಿತ ವ್ಯಕ್ತಿಗಳನ್ನು ಗಾಸಿಗೊಳಿಸುವುದಷ್ಟೇ ಅಲ್ಲ, ಮಹಿಳೆಯರ ಹಕ್ಕುಗಳ ವಿರುದ್ಧವಾಗಿರುವ ಕಾರಣ ಸಾರ್ವತ್ರಿಕವಾಗಿಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಪದ್ಧತಿಯು ಮಹಿಳೆಯರ ಹಕ್ಕುಗಳಿಗೆ ಹಾಗೂ ಮದುವೆ ಎನ್ನುವ ಸಾಮಾಜಿಕ ವ್ಯವಸ್ಥೆಗೆ ವಿರುದ್ಧವಾಗಿದೆ’ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
2017ರಲ್ಲಿ ಶಾಯರಾ ಬಾನು ಪ್ರಕರಣದಲ್ಲಿ ನೀಡಿದ ಬಹುಮತದ (3:2) ತೀರ್ಪಿನಲ್ಲಿ, ತ್ರಿವಳಿ ತಲಾಖ್ ಪದ್ಧತಿಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವೇ ಹೇಳಿರುವಾಗ, ಈ ಪದ್ಧತಿಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸುವ ಕಾನೂನು ತರ್ಕರಹಿತವಾದುದು ಎಂದೋ, ಅತಿರೇಕದ ಕ್ರಮ ಎಂದೋ ಹೇಳಲು ಸಾಧ್ಯವಿಲ್ಲ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
‘ತ್ರಿವಳಿ ತಲಾಖ್ ಎಂಬುದು ಕೆಟ್ಟ ಆಚರಣೆ ಎನ್ನುವುದನ್ನು ಶಾಯರಾ ಬಾನು ಪ್ರಕರಣವು ಅದಾಗಲೇ ಗುರುತಿಸಿತ್ತು. ಈ ಪದ್ಧತಿಯನ್ನು ಆಚರಿಸುವವರಲ್ಲಿ ಭೀತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷೆಗೆ ಅವಕಾಶ ಕಲ್ಪಿಸುವ ಕೆಲಸವನ್ನು ಮಾತ್ರ ಕಾನೂನಿನ ಮೂಲಕ ಮಾಡಲಾಗಿದೆ’ ಎಂದು ಕೇಂದ್ರ ಹೇಳಿದೆ.
‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆ–2019’ಅನ್ನು ಪ್ರಶ್ನಿಸಿ ‘ಸಮಸ್ತ ಕೇರಳ ಜಮಿಯತ್‌ಉಲ್ ಉಲೇಮಾ’ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರವು ಈ ಪ್ರಮಾಣಪತ್ರವನ್ನು ಸಲ್ಲಿಸಿದೆ.
ವಿವಾಹವು ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಬರುತ್ತದೆಯಾದ ಕಾರಣಕ್ಕೆ ಅದು ಎಲ್ಲರಿಗೂ ಅನ್ವಯವಾಗುವ ಕ್ರಿಮಿನಲ್ ಕಾನೂನುಗಳ ವ್ಯಾಪ್ತಿಯಿಂದ ಹೊರಗಿರುತ್ತದೆ ಎಂಬ ವಾದಕ್ಕೆ ಆಧಾರ ಇಲ್ಲ ಎಂದು ಕೇಂದ್ರವು ಹೇಳಿದೆ.
‘ವಿವಾಹವೆಂಬುದು ಸಾಮಾಜಿಕ ಪದ್ಧತಿ. ಇದನ್ನು ರಕ್ಷಿಸುವ ವಿಶೇಷವಾದ ಆಸಕ್ತಿಯು ಪ್ರಭುತ್ವಕ್ಕೆ ಇರುತ್ತದೆ. ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳ ಮೂಲಕ ಪ್ರಭುತ್ವವು ವಿವಾಹ ಸಂಬಂಧಗಳ ಸ್ಥಿರತೆಯನ್ನು ಕಾಪಾಡುವ ಕೆಲಸ ಮಾಡಬಹುದು ಎಂಬುದರಲ್ಲಿ ಅನುಮಾನ ಇಲ್ಲ. ವಿವಾಹ ಪದ್ಧತಿಯ ಪಾವಿತ್ರ್ಯವನ್ನು ಕಾಪಾಡುವ ತತ್ವದ ಆಧಾರದಲ್ಲಿ ಈ ಕಾಯ್ದೆಯನ್ನು ರೂಪಿಸಿರುವಂತೆಯೇ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದು ಕೇಂದ್ರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.